ಕೊನೆಗೂ ತಂಡಕ್ಕೆ ನಾನೇ ಆಸರೆ ಎಂದು ರುಜುವಾತು ಪಡಿಸಿದ ಧೋನಿ
ಶ್ರೀಲಂಕಾ ವಿರುದ್ಧದ ಮೂರನೇ ಪಂದ್ಯವನ್ನು ಗೆಲ್ಲುವ ಮೂಲಕ ಏಕದಿನ ಸರಣಿಯನ್ನು ಟೀಂ ಇಂಡಿಯಾ ಕೈವಶ ಮಾಡಿಕೊಂಡಿರುವ ಖುಷಿಯಲ್ಲಿದೆ...
ಶ್ರೀಲಂಕಾ: ಶ್ರೀಲಂಕಾ ವಿರುದ್ಧದ ಮೂರನೇ ಪಂದ್ಯವನ್ನು ಗೆಲ್ಲುವ ಮೂಲಕ ಏಕದಿನ ಸರಣಿಯನ್ನು ಟೀಂ ಇಂಡಿಯಾ ಕೈವಶ ಮಾಡಿಕೊಂಡಿರುವ ಖುಷಿಯಲ್ಲಿದೆ. ಆದರೆ ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶ ಎಂದರೇ 61 ರನ್ ಗಳಿಗೆ ಪ್ರಮುಖ 4 ವಿಕೆಟ್ ಕಳೆದುಕೊಂಡಿದ್ದ ತಂಡಕ್ಕೆ ಕೊನೆಗೂ ಆಸರೆಯಾಗಿದ್ದು ಮಾಜಿ ನಾಯಕ ಎಂಎಸ್ ಧೋನಿ.
ಹೌದು ಲಂಕಾ ವಿರುದ್ಧದ ಎರಡನೇ ಮತ್ತು ಮೂರನೇ ಪಂದ್ಯದಲ್ಲಿ ಧೋನಿ ಇನ್ನು ಸಾಧಿಸಿ ತೋರಿಸಿದ್ದಾರೆ. ಎರಡನೇ ಪಂದ್ಯದಲ್ಲಿ ವೇಗಿ ಭುವನೇಶ್ವರ್ ಕುಮಾರ್ ಜತೆ ಸೇರಿ ಶತಕ ಜತೆಯಾಟ ನೀಡಿ ತಂಡವನ್ನು ಗೆಲ್ಲಿಸಿದ್ದರು. ಇನ್ನು ಮೂರನೇ ಪಂದ್ಯದಲ್ಲಿ 61 ರನ್ ಗಳಿಗೆ ಪ್ರಮುಖ ನಾಲ್ಕು ವಿಕೆಟ್ ಗಳು ಪತನವಾದಾಗ ಮತ್ತೆ ಕಣಕ್ಕೆ ಬಂದ ಧೋನಿ ರೋಹಿತ್ ಶರ್ಮಾ ಜತೆ ಸೇರಿ ಮತ್ತೆ ತಂಡವನ್ನು ಸೋಲಿನ ದವಡೆಯಿಂದ ಪಾರು ಮಾಡಿದ್ದಾರೆ. ಇದನ್ನು ಗಮನಿಸಿದರೇ ತಂಡಕ್ಕೆ ಧೋನಿಯ ಅವಶ್ಯಕತೆ ಹೆಚ್ಚಿದೆ ಎಂದು ಅರ್ಥವಾಗುತ್ತದೆ.
ಮೂರನೇ ಪಂದ್ಯದಲ್ಲಿ ರೋಹಿತ್ ಶರ್ಮಾ ಶತಕ ಸಿಡಿಸಿದ್ದು ಧೋನಿ 67 ರನ್ ಗಳನ್ನು ಬಾರಿಸಿದ್ದಾರೆ. ಇವರಿಬ್ಬರ ಜತೆಯಾಟದಲ್ಲಿ ಬರೋಬ್ಬರಿ 157 ರನ್ ಕಲೆ ಹಾಕಿದ್ದು ತಂಡವನ್ನು ಗೆಲುವಿನ ದಡ ಮುಟ್ಟಿತ್ತು.
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸತತ ವೈಫಲ್ಯ ಅನುಭವಿಸುತ್ತಿದ್ದಾರೆ. ಲಂಕಾ ವಿರುದ್ಧ ಮೊದಲ ಪಂದ್ಯ ಬಿಟ್ಟರೇ ನಂತರದ ಎರಡು ಪಂದ್ಯಗಳಲ್ಲಿ ಬರೀ 7 ರನ್ ಗಳಿಸಿದ್ದು ತಂಡ ಒತ್ತಡಕ್ಕೆ ಸಿಲುಕಿದಾಗ ತಂಡಕ್ಕೆ ಆಸರೆಯಾಗದೇ ಮತ್ತಷ್ಟು ಹೊರೆಯಾಗುತ್ತಿದ್ದಾರೆ.
ಲಂಕಾ ವಿರುದ್ಧ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾ 3-0 ಅಂತರದಿಂದ ಸರಣಿಯನ್ನು ಕೈವಶ ಮಾಡಿಕೊಂಡಿದೆ. ಇನ್ನುಳಿದ ಎರಡು ಪಂದ್ಯಗಳು ಟೈಮ್ ಪಾಸ್ ಪಂದ್ಯವಾಗಿದ್ದರೂ ಆ ಎರಡು ಪಂದ್ಯಗಳನ್ನು ಗೆದ್ದು ಮತ್ತೆ ಲಂಕಾವನ್ನು ಕ್ಲೀನ್ ಸ್ವೀಪ್ ಮಾಡುವ ತವಕದಲ್ಲಿದೆ ಭಾರತ.