ಎಂಎಸ್ ಧೋನಿ, ವೀರೇಂದ್ರ ಸೆಹ್ವಾಗ್
ನವದೆಹಲಿ: ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಅವರ ಸ್ಥಾನವನ್ನು ತುಂಬಬಲ್ಲ ಆಟಗಾರ ಸದ್ಯಕ್ಕೆ ಯಾರೂ ಇಲ್ಲ. ಆದ್ದರಿಂದ 2019ರವರೆಗೂ ತಂಡದಲ್ಲಿ ಧೋನಿ ಸ್ಥಾನ ಸುಭದ್ರ ಎಂದು ಕ್ರಿಕೆಟ್ ದಿಗ್ಗಜ ವೀರೇಂದ್ರ ಸೆಹ್ವಾಗ್ ಹೇಳಿದ್ದಾರೆ.
ಸುದ್ದಿ ಸಂಸ್ಥೆಯೊಂದರ ಸಂದರ್ಶನದ ವೇಳೆ ಮಾತನಾಡಿದ ವೀರೇಂದ್ರ ಸೆಹ್ವಾಗ್, ರಿಷಭ್ ಪಂತ್ ಕೂಡ ವಿಕೆಟ್ ಕೀಪರ್ ಆಗಿದ್ದು ಬ್ಯಾಟಿಂಗ್ ನಲ್ಲೂ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಆದರೆ ಧೋನಿ ಸ್ಥಾನವನ್ನು ತುಂಬುವಂಥ ಸಾಮರ್ಥ್ಯ ತೋರಲು ಅವರಿಗೆ ಇನ್ನೂ ಸಾಕಷ್ಟು ಸಮಯ ಬೇಕು. ಆದ್ದರಿಂದ 2019ರ ವಿಶ್ವಕಪ್ ನಂತರವಷ್ಟೇ ಈ ಕುರಿತು ಚಿಂತನೆ ನಡೆಸಬಹುದು ಎಂದು ಹೇಳಿದ್ದಾರೆ.
ಎಲ್ಲಾ ಪಂದ್ಯಗಳಲ್ಲೂ ಧೋನಿ ರನ್ ಗಳಿಸುತ್ತಾರೆಯೋ ಇಲ್ಲವೋ ಎಂಬುದರ ಬಗ್ಗೆ ಚಿಂತಿಸಬೇಕಾದ ಅಗತ್ಯವಿಲ್ಲ. ಮುಂದಿನ ವಿಶ್ವಕಪ್ ವರೆಗೂ ಆಡಲು ಸಮರ್ಥರಾಗಿರಲಿ ಎಂದು ನಾವೆಲ್ಲರೂ ಪ್ರಾರ್ಥಿಸಬೇಕಾದ ಅಗತ್ಯವಿದೆ. ಮಧ್ಯಮ ಮತ್ತು ಕೆಳ ಮಧ್ಯಮ ಕ್ರಮಾಂಕದಲ್ಲಿ ಅವರು ಹೊಂದಿರುವ ಅನುಭವ ಅಪಾರ ಎಂದು ಸೆಹ್ವಾಗ್ ಹೇಳಿದ್ದಾರೆ.