ಆಸ್ಟ್ರೇಲಿಯಾ ವಿರುದ್ದ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾಗೆ ಐತಿಹಾಸಿಕ ಜಯ
ಢಾಕಾ: ಆಸ್ಟ್ರೇಲಿಯಾ ವಿರುದ್ದ ಟೆಸ್ಟ್ ನಲ್ಲಿ ಬಾಂಗ್ಲಾದೇಶ 20 ರನ್ ಗಳಿಂದ ಜಯ ಸಾಧಿಸಿದೆ. ಢಾಕಾದಲ್ಲಿ ನಡೆಯುತ್ತಿದ್ದ ಟೆಸ್ಟ್ ಪಂದ್ಯದ ನಾಲ್ಕನೇ ದಿನ ಬಾಂಗ್ಲಾಗೆ ಜಯ ಲಭಿಸಿದೆ.
ಇದೇ ಮೊದಲ ಬಾರಿಗೆ ಟೆಸ್ಟ್ ಪಂದ್ಯ ಒಂದರಲ್ಲಿ ಬಾಂಗ್ಲಾದೇಶವು ಆಸ್ಟ್ರೇಲಿಯಾವನ್ನು ಮಣಿಸಿದೆ.
ಬಾಂಗ್ಲಾದೇಶವು ತನ್ನ ಪ್ರಥಮ ಇನ್ನಿಂಗ್ಸ್ ನಲ್ಲಿ 260 ಮತ್ತು ದ್ವಿತೀಯ ಇನ್ನಿಂಗ್ಸ್ ನಲ್ಲಿ 221 ರನ್ ಸ್ಕೋರ್ ಮಾಡಿತ್ತು. ಆಸ್ಟ್ರೇಲಿಯಾ ಕ್ರಮವಾಗಿ 217 ಮತ್ತು 244 ರನ್ ಗಳಿಸುವ ಮೂಲಕ ಸೋಲಿಗೆ ಶರಣಾಗಿದೆ. ಬಾಂಗ್ಲಾ ನೀಡಿದ್ದ 265ರನ್‌ಗಳ ಗೆಲುವಿನ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ನಾಲ್ಕನೇ ದಿನದ ಆಟದಲ್ಲಿ 244 ರನ್ ಗಳಿಸಿ ತನ್ನೆಲ್ಲ ವಿಕೆಟ್ ಕಳೆದುಕೊಂಡಿತು.
ಈ ಗೆಲುವಿನೊಂದಿಗೆ ಎರಡು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಬಾಂಗ್ಲಾ 1-0 ಅಂತರದ ಮುನ್ನಡೆ ಸಾಧಿಸಿದೆ.