ವಿವಿಎಸ್ ಲಕ್ಷ್ಮಣ್-ರಸ್ಸೆಲ್ ಅರ್ನಾಲ್ಡ್
ನವದೆಹಲಿ: ಸದ್ಯ ಕ್ರಿಕೆಟ್ ನಲ್ಲಿ ಟೀಂ ಇಂಡಿಯಾದ ಗೆಲುವಿನ ನಾಗಲೋಟಕ್ಕೆ ತಡೆಯೊಡ್ಡುವವರು ಯಾರು ಇಲ್ಲದಂತಾಗಿದೆ. ಅಂತಹ ಟೀಂ ಇಂಡಿಯಾ ಮುಂಬರುವ ಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ವೈಟ್‌ವಾಶ್ ಗೆಲುವು ಸಾಧಿಸುವುದಿಲ್ಲ ಎಂದು ಲಂಕಾದ ಮಾಜಿ ಕ್ರಿಕೆಟಿಗ ರಸ್ಸೆಲ್ ಅರ್ನಾಲ್ಡ್ ಭವಿಷ್ಯಕ್ಕೆ ಟೀಂ ಇಂಡಿಯಾ ಮಾಜಿ ಆಟಗಾರ ವಿವಿಎಸ್ ಲಕ್ಷ್ಣಣ್ ತಿರುಗೇಟು ನೀಡಿದ್ದಾರೆ.
ಈ ಹಿಂದೆ ಶ್ರೀಲಂಕಾ ಪ್ರವಾಸ ಕೈಗೊಂಡಿದ್ದ ಟೀಂ ಇಂಡಿಯಾ ಟೆಸ್ಟ್, ಏಕದಿನ ಮತ್ತು ಟಿ20 ಸರಣಿ ಸೇರಿದಂತೆ ಒಟ್ಟಾರೆ ಒಂಬತ್ತು ಪಂದ್ಯಗಳಲ್ಲೂ ಗೆಲುವು ಸಾಧಿಸುವ ಮೂಲಕ ಮೂರು ಮಾದರಿಯಲ್ಲೂ ಭಾರತ ಲಂಕಾ ತಂಡವನ್ನು ವೈಟ್ ವಾಶ್ ಮಾಡಿತ್ತು. ಇದೇ ವಿಚಾರವಾಗಿ ಅರ್ನಾಲ್ಡ್ ಟ್ವೀಟ್ ಮಾಡಿದ್ದು ಟೆಸ್ಟ್ ಸರಣಿಯಲ್ಲಿ ಲಂಕಾ ಭಾರತಕ್ಕೆ ವೈಟ್ ವಾಶ್ ಮಾಡುವ ಅವಕಾಶ ನೀಡಲಿಲ್ಲ. ಅದೇ ರೀತಿ ಮುಂಬರುವ 5 ಪಂದ್ಯಗಳ ಏಕದಿನ ಸರಣಿಯಲ್ಲೂ ಭಾರತಕ್ಕೆ ಲಂಕಾ ತಂಡ ವೈಟ್ ವಾಶ್ ಮಾಡಲು ಬಿಡುವುದಿಲ್ಲ ಎಂದು ಟ್ವೀಟಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ವಿವಿಎಸ್ ಲಕ್ಷ್ಮಣ್ ರಸ್ಸೆಲ್ ನಿಮ್ಮ ಭವಿಷ್ಯ ಸುಳ್ಳಾಗಲಿದೆ. ಭಾರತ ಮತ್ತು ಲಂಕಾ ನಡುವಿನ ಏಕದಿನ ಸರಣಿ 3 ಪಂದ್ಯಗಳಿಂದ ಕೂಡಿದ್ದು ನಿಮ್ಮ ಭವಿಷ್ಯ ಸುಳ್ಳಾಗಲಿದೆ ಎಂದು ಟ್ವೀಟಿಸಿದ್ದಾರೆ.
ಡಿಸೆಂಬರ್ 10 ರಿಂದ ಭಾರತ ಮತ್ತು ಲಂಕಾ ನಡುವಿನ ಏಕದಿನ ಸರಣಿ ಪ್ರಾರಂಭವಾಗಲಿದೆ. ನಂತರ ಡಿಸೆಂಬರ್ 20ರಿಂದ ಟಿ20 ಸರಣಿ ಪ್ರಾರಂಭವಾಗಿದೆ. ಸದ್ಯ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ 1 ಪಂದ್ಯವನ್ನು ಗೆಲ್ಲುವ ಮೂಲಕ ಸರಣಿಯನ್ನು ಕೈವಶ ಮಾಡಿಕೊಂಡಿದೆ.