ಕ್ರಿಕೆಟ್

ಮೊದಲ ಟಿ20 ಪಂದ್ಯ: ಶ್ರೀಲಂಕಾ ವಿರುದ್ಧ ಭಾರತಕ್ಕೆ 93 ರನ್ ಗಳ ಭರ್ಜರಿ ಜಯ

Srinivasamurthy VN
ಕಟಕ್: ಶ್ರೀಲಂಕಾ ವಿರುದ್ಧ ಕಟಕ್ ನಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಭಾರತ ತಂಡ 93 ರನ್ ಗಳ ಭರ್ಜರಿ ಜಯ ದಾಖಲಿಸಿದೆ.
ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗಲ್ಲಿ ಶ್ರೀಲಂಕಾ ವಿರುದ್ಧ ಪಾರಮ್ಯ ಮೆರೆದ ಟೀಂ ಇಂಡಿಯಾ ಅರ್ಹವಾಗಿಯೇ ಪಂದ್ಯ ಜಯಿಸಿತು. ಭಾರತ ನೀಡಿದ 181 ರನ್ ಗಳ ಗುರಿ ಬೆನ್ನು ಹತ್ತಿದ ಶ್ರೀಲಂಕಾ ಕೇವಲ 16 ಓವರ್ ಗಳಲ್ಲಿ 87 ರನ್ ಗಳಿಸಿ ಆಲ್ ಔಟ್ ಆಯಿತು. ಶ್ರೀಲಂಕಾ ಪರ  ಆರಂಭಿಕ ಆಟಗಾರ ತರಂಗಾ ಗಳಿಸಿದ 23 ರನ್ ಗಳೇ ಆ ತಂಡದ ಆಟಗಾರನ ವೈಯುಕ್ತಿಕ ಗರಿಷ್ಠ ರನ್ ಗಳಿಕೆಯಾಗಿತ್ತು.
ಇನ್ನು ಲಂಕಾ ದಾಂಡಿಗರ ವಿರುದ್ಧ ಭರ್ಜರಿ ಬೌಲಿಂಗ್ ಪ್ರದರ್ಶನ ನೀಡಿದ ಟೀಂ ಇಂಡಿಯಾ ಬೌಲರ್ ಗಳು ನಿಗದಿತವಾಗಿ ವಿಕೆಟ್ ಪಡೆಯುವ ಮೂಲಕ ಲಂಕಾ ಪತನಕ್ಕೆ ಕಾರಣರಾದರು. ಪ್ರಮುಖವಾಗಿ ಚಾಹಲ್ ಮತ್ತು ಪಾಂಡ್ಯಾ ದಾಳಿ ಉತ್ತಮವಾಗಿತ್ತು.
ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ನಡೆಸಿದ್ದ ಭಾರತ ತಂಡ ನಿಗದಿತ 20 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 180 ರನ್ ಗಳಿಸಿತ್ತು. ಭಾರತದ ಪರ ಆರಂಭಿಕ ಆಟಗಾರ ಕೆಎಲ್ ರಾಹುಲ್ ಕೇವಲ 48 ಎಸೆತಗಳಲ್ಲಿ 7 ಬೌಂಡರಿ ಒಂದು ಸಿಕ್ಸರ್ ನೆರವಿನಿಂದ 61 ರನ್ ಕಲೆ ಹಾಕಿದ್ದರು.  ಅಂತಿಮ ಹಂತದಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿದ ಮನೀಷ್ ಪಾಂಡೆ (32 ರನ್, 18 ಎಸೆತ) ಹಾಗೂ ಎಂಎಸ್ ಧೋನಿ (39 ರನ್, 22 ಎಸೆತ) ಭಾರತದ ರನ್ ಗಳಿಕೆಯನ್ನು 180ರ ಗಡಿ ದಾಟಿಸಿದರು.
SCROLL FOR NEXT