ಕ್ರಿಕೆಟ್

ಸ್ಪಿನ್ನರ್ ಗಳನ್ನು ಎದುರಿಸಲಾಗದಿದ್ದರೆ ಭಾರತಕ್ಕೆ ಕಾಲಿಡಬೇಡಿ: ಆಸಿಸ್ ಗೆ ಪೀಟರ್ಸನ್ ಸಲಹೆ

Srinivasamurthy VN

ನವದೆಹಲಿ: ಸ್ಪಿನ್ನರ್ ಗಳನ್ನು ಸಮರ್ಥವಾಗಿ ಎದುರಿಸಲು ಸಿದ್ಧರಾಗಿದ್ದರೆ ಮಾತ್ರ ಭಾರತಕ್ಕೆ ಕಾಲಿಡಿ... ಇಲ್ಲವಾದಲ್ಲಿ ಪ್ರವಾಸ ಬೇಡ ಎಂದು ಇಂಗ್ಲೆಂಡ್ ತಂಡದ ಮಾಜಿ ಕ್ರಿಕೆಟಿಗ ಕೆವಿನ್ ಪೀಟರ್ಸನ್ ಆಸ್ಟ್ರೇಲಿಯಾ ತಂಡಕ್ಕೆ ಸಲಹೆ ನೀಡಿದ್ದಾರೆ.

ಇದೇ ಫೆಬ್ರವರಿ 23ರಿಂದ ಭಾರತದ ವಿರುದ್ಧದ 4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳಲು ಆಸ್ಟ್ರೇಲಿಯಾ ತಂಡ ಆಗಮಿಸುತ್ತಿದೆ. ಇತ್ತೀಚೆಗಷ್ಟೇ ಇಂಗ್ಲೆಂಡ್ ವಿರುದ್ಧ ಮುಕ್ತಾಯವಾದ ಟೆಸ್ಟ್ ಸರಣಿಯಲ್ಲಿ ಭಾರತ ಅಭೂತಪೂರ್ವ  ಪ್ರದರ್ಶನದೊಂದಿಗೆ ಸರಣಿ ಜಯ ಸಾಧಿಸಿತ್ತು. ಈ ಹಿನ್ನಲೆಯಲ್ಲಿ ಆಸಿಸ್ ತಂಡಕ್ಕೆ ಪರೋಕ್ಷ ಎಚ್ಚರಿಕೆ ನೀಡಿರುವ ಪೀಟರ್ಸನ್, ‘‘ಭಾರತೀಯ ಸ್ಪಿನ್ನರ್‌ಗಳ ವಿರುದ್ಧ ಹೇಗೆ ಆಡಬೇಕೆಂಬುದರ ಬಗ್ಗೆ ಬೇಗನೆ ಕಲಿತುಕೊಳ್ಳಿ. ನಿಮಗೆ  ಸ್ಪಿನ್ನರ್‌ಗಳ ವಿರುದ್ಧ ಆಡಲು ಸಾಧ್ಯವಾಗದಿದ್ದರೆ ಭಾರತಕ್ಕೆ ಪ್ರವಾಸ ಕೈಗೊಳ್ಳಬೇಡಿ. ನೀವು ಅಲ್ಲಿಗೆ(ಭಾರತ) ಹೋದರೆ ಅಲ್ಲಿ ಚೆನ್ನಾಗಿ ಅಭ್ಯಾಸ ಮಾಡಿ. ನೀವು ನಿಜವಾಗಿಯೂ ಕಠಿಣ ಅಭ್ಯಾಸ ಮಾಡಿದರೆ ಪ್ರತಿಫಲ ಸಿಗುತ್ತದೆ.  ಅಭ್ಯಾಸ ಮಾಡಲು ಸ್ಪಿನ್ ಸ್ನೇಹಿ ಪಿಚ್ ಇರಬೇಕೆಂದೇನೂ ಇಲ್ಲ. ಯಾವುದೇ ರೀತಿಯ ಪಿಚ್‌'ನಲ್ಲೂ ಅಭ್ಯಾಸ ಮಾಡಬಹುದು ಎಂದು ಕೆಪಿ ಹೇಳಿದ್ದಾರೆ.

2012ರಲ್ಲಿ ಇಂಗ್ಲೆಂಡ್ ತಂಡ ಭಾರತಕ್ಕೆ ಪ್ರವಾಸಕೈಗೊಂಡಿದ್ದಾಗ ಒಟ್ಟು 338 ರನ್ ಗಳಿಸಿದ್ದ ಪೀಟರ್ಸನ್ ಇಂಗ್ಲೆಂಡ್ ಸರಣಿ ಗೆಲ್ಲಲು ಪ್ರಮುಖ ಪಾತ್ರವಹಿಸಿದ್ದರು. ಇನ್ನು ಆಸ್ಟ್ರೇಲಿಯಾ ತಂಡ 2004ರ ಬಳಿಕ ಭಾರತದಲ್ಲಿ ಟೆಸ್ಟ್  ಸರಣಿಯನ್ನು ಗೆದ್ದಿಲ್ಲ. 2011ರಲ್ಲಿ ಏಷ್ಯಾ ಖಂಡದಲ್ಲಿ ಶ್ರೀಲಂಕಾದ ವಿರುದ್ಧ ಕೊನೆಯ ಬಾರಿ ಸರಣಿ ಗೆದ್ದುಕೊಂಡಿತ್ತು. ಉಪಖಂಡದಲ್ಲಿ ಸತತ 9 ಪಂದ್ಯಗಳನ್ನು ಸೋತಿರುವ ಆಸೀಸ್‌'ಗೆ ಇಂಗ್ಲೆಂಡ್ ವಿರುದ್ಧ 4-0 ಅಂತರದಿಂದ ಸರಣಿ  ಗೆದ್ದುಕೊಂಡಿರುವ ಭಾರತ ಕಬ್ಬಿಣದ ಕಡಲೆಯಾಗಲಿದೆ ಎಂದು ಕೆಪಿ ಅಭಿಪ್ರಾಯಪಟ್ಟಿದ್ದಾರೆ.

SCROLL FOR NEXT