ಮುಂಬೈ: ಕ್ರಿಕೆಟಿಗ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮತ್ತೆ ಸುದ್ದಿಯಲ್ಲಿದ್ದು, ಮನೆ ಹುಡುಕಾಟ ಸಂದರ್ಭದಲ್ಲಿ ಕ್ಯಾಮೆರಾಗಳ ಕಣ್ಣಿಗೆ ಸಿಕ್ಕಿಬಿದ್ದಿದ್ದಾರೆ.
ಬ್ರೇಕ್ ಅಪ್ ಆಗಿ ಮತ್ತೆ ಒಂದಾಗಿದ್ದ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಜೋಡಿ ಇತ್ತೀಚೆಗೆ ಸುದ್ದಿಗಳಿಂದ ದೂರವಿದ್ದರು. ಆದರೆ ಇತ್ತೀಚೆಗೆ ಜಂಟಿಯಾಗಿ ಮನೆ ಹುಡುಕುವಾಗ ಆಕಸ್ಮಿಕವಾಗಿ ಕೆಮೆರಾಕಣ್ಣಿಗೆ ಬಿದ್ದಿದ್ದು, ಇಬ್ಬರು ಮದುವೆ ಬಳಿಕ ಜೀವನ ನಡೆಸಲು ಮನೆ ಹುಡುಕುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಿಬಿಡಲಾಗುತ್ತಿದೆ. ಮೂಲಗಳ ಪ್ರಕಾರ ವಿರಾಟ್ ಕೊಹ್ಲಿ ಹಾಗೂ ನಟಿ ಅನುಷ್ಕಾ ಶರ್ಮಾ ಇತ್ತೀಚೆಗೆ ಮುಂಬೈನ ಪ್ರತಿಷ್ಟಿತ ವ್ಹೊರ್ಲಿ ಪ್ರದೇಶದಲ್ಲಿರುವ ನಿರ್ಮಾಣ ಹಂತದ ಕಟ್ಟಡ ವೀಕ್ಷಣೆಗೆ ಆಗಮಿಸಿದ್ದರು. ಈ ವೇಳೆ ಸ್ಥಳೀಯರೊಬ್ಬರು ತಮ್ಮ ಮೊಬೈಲ್ ನಲ್ಲಿ ಇದನ್ನು ಚಿತ್ರೀಕರಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ.
2015ರಲ್ಲೇ ಕೊಹ್ಲಿ 5 ಬೆಡ್ ರೂಮಿನ ಬಂಗಲೆಯನ್ನು ಖರೀದಿಸಿದ್ದು, ಕಟ್ಟಡದ 35ನೇ ಅಂತಸ್ತಿನಲ್ಲಿ ಈ ಬಂಗಲೆ ಇದೆ. 2018ರ ವೇಳೆಗೆ ಇದರ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದ್ದು, ಇದರ ನಿರ್ಮಾಣ ಕಾಮಗಾರಿಯನ್ನು ವೀಕ್ಷಿಸಲು ಕೊಹ್ಲಿ ಮತ್ತು ಅನುಷ್ಕಾ ಆಗಮಿಸಿದ್ದರು ಎಂದು ತಿಳಿದುಬಂದಿದೆ. ಇದೀಗ ಈ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವ್ಯಾಪಕ ಚರ್ಚೆಗೀಡಾಗಿವೆ.
ಈ ವಿಡಿಯೋ ಇದೀಗ ಮಾಧ್ಯಮಗಳ ಕೈಗೆ ಸಿಕ್ಕಿದ್ದು, ಕೊಹ್ಲಿ ಮತ್ತು ಅನುಷ್ಕಾ ಮದುವೆ ಸಿದ್ಧತೆಯಲ್ಲಿರುವ ಕುರಿತು ಗಾಸಿಪ್ ಹಬ್ಬಿಸುತ್ತಿವೆ. ಈ ಬಗ್ಗೆ ಸಾಕಷ್ಟು ಚರ್ಚೆಗಳಾಗುತ್ತಿವೆಯಾದರೂ ಕೊಹ್ಲಿಯಾಗಲೀ ಅಥವಾ ಅನುಷ್ಕಾ ಆಗಲೀ ಯಾರೂ ಈ ಬಗ್ಗೆ ಸ್ಪಷ್ಟನೆ ನೀಡಲು ಮುಂದಾಗುತ್ತಿಲ್ಲ. ಇತ್ತೀಚೆಗಷ್ಟೇ ಅಂದರೆ ಹೊಸ ವರ್ಷಾಚರಣೆ ವೇಳೆ ಈ ಜೋಡಿ ಉತ್ತರಾಖಂಡದಲ್ಲಿ ಹೊಸ ವರ್ಷಾಚರಣೆ ಮಾಡಿಕೊಂಡಿತ್ತು ಎಂದು ಹಲವು ಪತ್ರಿಕೆಗಳು ವರದಿ ಮಾಡಿದ್ದವು. ಅಂತೆಯೇ ಈಗಾಗಲೇ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಮದುವೆ ನಿಶ್ಚಿತಾರ್ಥ ಕೂಡ ಮುಗಿದಿದೆ ಎಂದೂ ಕೆಲ ಮಾಧ್ಯಮಗಳು ವರದಿ ಮಾಡಿದ್ದವು.