ಪುಣೆ: ಇಂಗ್ಲೆಂಡ್ ವಿರುದ್ಧ ಬೃಹತ್ ಮೊತ್ತದ ಪಂದ್ಯದಲ್ಲಿ ಶತಕ ಸಿಡಿಸುವ ಮೂಲಕ ರಾತ್ರೋ ರಾತ್ರಿ ಟೀ ಇಂಡಿಯಾ ಪಾಲಿನ ಹೀರೋ ಆದ ಕೇದಾರ್ ಜಾದವ್ ತಮ್ಮ ಅದ್ಬುತ ಪ್ರದರ್ಶನದ ಹಿಂದಿನ ಮರ್ಮವನ್ನು ತಿಳಿಸಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಬೃಹತ್ ಗುರಿಯನ್ನು ಬೆನ್ನುಹತ್ತಿದ್ದ ಭಾರತ ತಂಡಕ್ಕೆ ತಮ್ಮ ಅದ್ಬುತ ಬ್ಯಾಟಿಂಗ್ ಪ್ರದರ್ಶನದ ಮೂಲಕ ನೆರವಾಗಿ ರಾತ್ರೋ ರಾತ್ರಿ ಚರ್ಚೆಯ ಕೇಂದ್ರ ಬಿಂದುವಾದ ಕೇದಾರ್ ಜಾಧವ್ ತಮ್ಮ ಅದ್ಬುತ ಪ್ರದರ್ಶನದ ಹಿಂದಿನ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ. ಇಂಗ್ಲೆಂಡ್ ನೀಡಿದ್ದ ಬೃಹತ್ ರನ್ ಗುರಿಯ ಒತ್ತಡದ ಹೊರತಾಗಿಯೂ ಆಂಗ್ಲ ಪಡೆಯ ಅನುಭವಿ ಬೌಲರ್ ಗಳನ್ನು ಸಮರ್ಥವಾಗಿ ದಂಡಿಸಿ ಭಾರತದ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದ್ದ ಕೇದಾರ್ ಜಾದವ್ ತಮ್ಮ ಅದ್ಬುತ ಬ್ಯಾಟಿಂಗ್ ಪ್ರದರ್ಶನಕ್ಕೆ ವಿರಾಟ್ ಕೊಹ್ಲಿಯೇ ಕಾರಣ ಎಂದು ಹೇಳಿದ್ದಾರೆ.
ಕ್ರೀಸ್ ನಲ್ಲಿರುವಾಗ ಇಂಗ್ಲೆಂಡ್ ತಂಡದ ಅಷ್ಟೂ ಬೌಲರ್ ಗಳು ವಿರಾಟ್ ಕೊಹ್ಲಿ ಅವರನ್ನೇ ಕೇಂದ್ರವಾಗಿಟ್ಟುಕೊಂಡು ಬೌಲ್ ಮಾಡುತ್ತಿದ್ದರು. ಹೀಗಾಗಿ ನಾನು ಕ್ರೀಸ್ ನಲ್ಲಿ ಒತ್ತಡ ರಹಿತವಾಗಿ ಬ್ಯಾಟ್ ಬೀಸಲು ನೆರವಾಯಿತು. ಅದ್ಬುತ ಫಾರ್ಮ್ ನಲ್ಲಿರುವ ಕೊಹ್ಲಿ ವಿಕೆಟ್ ಪಡೆಯುವ ಗುರಿಯಿಂದಲೇ ಇಂಗ್ಲೆಂಡ್ ಬೌಲರ್ ಗಳು ಬೌಲಿಂಗ್ ಮಾಡುತ್ತಿದ್ದರು. ಹೀಗಾಗಿ ನನ್ನತ್ತ ಬರುತ್ತಿದ್ದ ಕೆಟ್ಟ ಎಸೆತಗಳನ್ನು ನಾನು ದಂಡಿಸುತ್ತಿದ್ದೆ. ಬೌಲರ್ ಗಳು ನಮ್ಮನ್ನು ಲಘುವಾಗಿ ಪರಿಗಣಿಸುತ್ತಿದ್ದರಿಂದ ನಾನು ಹೆಚ್ಚು ಒತ್ತಡರಹಿತನಾಗಿ ಆಟವಾಡಲು ನೆರವಾಯಿತು ಎಂದು ಕೇದಾರ್ ಜಾದವ್ ಹೇಳಿದ್ದಾರೆ.
ಓರ್ವ ಬ್ಯಾಟ್ಸಮನ್ ದೃಷ್ಟಿಕೋನದಿಂದ ನೋಡುವುದಾದರೆ ಇನ್ ಸೈಡ್ ಸರ್ಕಲ್ ನಲ್ಲಿ ಹೆಚ್ಚು ಫೀಲ್ಡರ್ ಗಳಿದ್ದಾಗ ಮತ್ತು ಎದುರಾಳಿ ತಂಡ ಆಕ್ರಮಣಕಾರಿ ಫೀಲ್ಡಿಂಗ್ ಸೆಟ್ ಮಾಡಿದಾಗ ಹೆಚ್ಚು ರನ್ ಗಳಿಸಲು ಅವಕಾಶವಿರುತ್ತದೆ. ಅದನ್ನು ಸಮರ್ಥವಾಗಿ ಬಳಿಸಿಕೊಳ್ಳಬೇಕು ಇಲ್ಲವಾದಲ್ಲಿ ವಿಕೆಟ್ ಗಳು ಬೀಳುವ ಸಾಧ್ಯತೆಗಳೂ ಹೆಚ್ಚಿರುತ್ತದೆ. ಪುಣೆ ಪಿಚ್ ಬ್ಯಾಟಿಂಗ್ ಗೆ ಉತ್ತಮವಾಗಿತ್ತು. ನನ್ನ ಸಹಜ ಆಟವಾಡಲು ಇದು ನೆರವಾಗಿತ್ತು. ದೇಶವನ್ನು ಪ್ರತಿನಿಧಿಸುವಾಗ ನಾವು ಶೇ.100ಕ್ಕಿಂತ ಹೆಚ್ಚು ಪರಿಶ್ರಮ ಪಡಬೇಕು ಆಗ ಮಾತ್ರ ಯಶಸ್ಸು ಸಾಧ್ಯ ಎನ್ನುವುದನ್ನು ನಾನು ಹಿರಿಯರಿಂದ ಕಲಿತಿದ್ದೇನೆ. ಪುಣೆಯ ಯಶಸ್ಸಿಗೆ ಇದೂ ಒಂದು ಕಾರಣ ಎಂದು ಕೇದಾರ್ ಜಾದವ್ ಹೇಳಿದ್ದಾರೆ.
ಇಂಗ್ಲೆಂಡ್ ವಿರುದ್ಧ ಪುಣೆಯಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ನೀಡಿದ್ದ 351 ರನ್ ಗಳ ಬೃಹತ್ ಗುರಿಯನ್ನು ಮುಟ್ಟಿ ಭಾರತ ತಂಡ ಅದ್ಬುತ ಗೆಲುವ ಸಾಧಿಸಿತ್ತು. ಭಾರತದ ಈ ಗೆಲುವಿನಲ್ಲಿ ನಾಯಕ ಕೊಹ್ಲಿ ಹಾಗೂ ಕೇದಾರ್ ಜಾದವ್ ತಲಾ ಶತಕ ಸಿಡಿಸುವ ಮೂಲಕ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ನಿರ್ವಹಿಸಿದ್ದರು. ಆರಂಭಿಕ ಆಘಾತ ಹಾಗೂ ಮಧ್ಯಮ ಕ್ರಮಾಂಕದ ದಿಢೀರ್ ಕುಸಿತದಿಂದಾಗಿ ಸೋಲಿನ ಸುಳಿಗೆ ಸಿಲುಕಿದ್ದ ಭಾರತ ತಂಡಕ್ಕೆ ಕೊಹ್ಲಿ ಮತ್ತು ಜಾದವ್ ಜೋಡಿ ದ್ವಿಶತಕದ ದಾಖಲೆಯ ಜೊತೆಯಾಟ ಆಡುವ ಮೂಲಕ ನೆರವಾಗಿದ್ದರು.