ಕ್ರಿಕೆಟ್

ಒಂದೇ ಟೂರ್ನಿಯಲ್ಲಿ ಕೊಹ್ಲಿ ದಾಖಲೆ ಮುರಿದ ಆಫ್ಘನ್ ಕ್ರಿಕೆಟಿಗ ಶೆಹ್ಜಾದ್!

Srinivasamurthy VN

ದುಬೈ: ಭಾರತೀಯ ಕ್ರಿಕೆಟ್ ತಂಡದ ನೂತನ ನಾಯಕ ವಿರಾಟ್ ಕೊಹ್ಲಿ ಈ ಹಿಂದೆ ನಿರ್ಮಿಸಿದ್ದ ವಿಶಿಷ್ಟ ದಾಖಲೆಯೊಂದನ್ನು ಕ್ರಿಕೆಟ್ ಶಿಶು ಆಫ್ಘಾನಿಸ್ತಾನ ಕ್ರಿಕೆಟ್ ತಂಡ ಆಟಗಾರ ಮಹಮದ್ ಶೆಹ್ಜಾದ್ ಮುರಿದಿದ್ದಾರೆ.

ದುಬೈನಲ್ಲಿ ಐರ್ಲೆಂಡ್ ವಿರುದ್ಧ ನಡೆದ ಟಿ20 ಸರಣಿಯಲ್ಲಿ ಮಹಮದ್ ಶೆಹ್ಜಾದ್ ಈ ಸಾಧನೆ ಗೈದಿದ್ದು, ಕೊಹ್ಲಿ ದಾಖಲೆ ವರ್ಷ ತುಂಬುವುದರೊಳಗೇ ಪತನವಾಗಿದೆ. ದುಬೈನಲ್ಲಿ ನಡೆಯುತ್ತಿರುವ ಟಿ20 ಸರಣಿಯಲ್ಲಿ ಮಹಮದ್  ಶೆಹ್ಜಾದ್ ಐರ್ಲೆಂಡ್ ವಿರುದ್ಧ ಸತತ 4 ಅರ್ಧಶತಕಗಳನ್ನು ಸಿಡಿಸುವ ಮೂಲಕ ಸರಣಿಯೊಂದರಲ್ಲಿ ಅತೀ ಹೆಚ್ಚು ಅರ್ಧಶತಕ ಸಿಡಿಸಿದ ಖ್ಯಾತಿಗೆ ಪಾತ್ರರಾಗಿದ್ದಾರೆ. ಅಂತೆಯೇ ಸರಣಿಯೊಂದರಲ್ಲಿ ಅತೀ ಹೆಚ್ಚು ಅರ್ಥಶತಕ ಸಿಡಿಸಿದ್ದ  ದಾಖಲೆ ಹೊಂದಿದ್ದ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿ ಆ ಸ್ಥಾನಕ್ಕೆ ಮಹಮದ್ ಶೆಹ್ಜಾದ್ ತಮ್ಮ ಹೆಸರನ್ನು ಬರೆದುಕೊಂಡಿದ್ದಾರೆ.

2016ರಲ್ಲಿ ನಡೆದ ಟಿ20 ವಿಶ್ವಕಪ್ ನಲ್ಲಿ ವಿರಾಟ್ ಕೊಹ್ಲಿ 3 ಅರ್ಧಶತಕಗಳನ್ನು ಸಿಡಿಸಿದ್ದರು. ಇದು ಆಟಗಾರನೊಬ್ಬ ಟಿ20 ಸರಣಿಯಲ್ಲಿ ಸಾಧಿಸಿದ ಅತ್ಯಧಿಕ ಅರ್ಧಶತಕ ಎಂಬ ಖ್ಯಾತಿ ಪಡೆದಿತ್ತು. ಆದರೆ ಇದೀಗ ಈ ದಾಖಲೆಯನ್ನು  ಮಹಮದ್ ಶೆಹ್ಜಾದ್ ನಾಲ್ಕು ಅರ್ಧಶತಕಗಳನ್ನು ಸಿಡಿಸುವ ಮೂಲಕ ಅಳಿಸಿ ಹಾಕಿದ್ದಾರೆ.

ದುಬೈನಲ್ಲಿ ನಡೆದ ಡೆಸರ್ಟ್ ಟಿ20 ಸರಣಿಯ ಫೈನಲ್ ಪಂದ್ಯದಲ್ಲಿ ಐರ್ಲೆಂಡ್ ನೀಡಿದ್ದ 72 ರನ್ ಗಳ ಗುರಿಯನ್ನು ಯಾವುದೇ ವಿಕೆಟ್ ನಷ್ಟವಿಲ್ಲದೇ ಆಫ್ಘನ್ ತಂಡ ಮುಟ್ಟಿತ್ತು. ಆಪ್ಘನ್ ಪರ ಮಹಮಜ್ ಶೆಹ್ಜಾದ್ ಅರ್ಧಶತಕ  ಸಿಡಿಸಿದ್ದರು. ಇನ್ನು ಬೌಲಿಂಗ್ ನಲ್ಲಿ ಜಾದೂ ಮಾಡಿದ ಮಹಮದ್ ನಭಿ ಕೇವಲ 2.2 ಓವರ್ ಗಳಲ್ಲಿ ಐರಿಶ್ ತಂಡದ ಪ್ರಮುಖ 4 ವಿಕೆಟ್ ಪಡೆಯುವ ಮೂಲಕ ಐರ್ಲೆಂಡ್ ತಂಡ 72 ರನ್ ಗಳ ಅಲ್ಪಮೊತ್ತಕ್ಕೆ ಕುಸಿಯುವಂತೆ ಮಾಡಿದ್ದರು.

SCROLL FOR NEXT