ಧೋನಿ ಹೇಗೆ ಆಡಬೇಕು ಎಂಬುದನ್ನು ಯಾರು ಹೇಳಿಕೊಡಬೇಕಿಲ್ಲ: ವಿರಾಟ್ ಕೊಹ್ಲಿ
ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಪರ ನಾಯಕ ವಿರಾಟ್ ಕೊಹ್ಲಿ ಬ್ಯಾಟ್ ಬೀಸಿದ್ದು, ಧೋನಿ ಹೇಗೆ ಆಡಬೇಕು ಎಂಬುದನ್ನು ಯಾರು ಹೇಳಿಕೊಡಬೇಕಿಲ್ಲ...
ಕಿಂಗ್ಸ್‌ಸ್ಟನ್: ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಪರ ನಾಯಕ ವಿರಾಟ್ ಕೊಹ್ಲಿ ಬ್ಯಾಟ್ ಬೀಸಿದ್ದು, ಧೋನಿ ಹೇಗೆ ಆಡಬೇಕು ಎಂಬುದನ್ನು ಯಾರು ಹೇಳಿಕೊಡಬೇಕಿಲ್ಲ ಎಂದು ಹೇಳಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧದ ನಾಲ್ಕನೇ ಪಂದ್ಯದಲ್ಲಿ ಧೋನಿ ನಿಧಾನಗತಿಯಲ್ಲಿ ಆಡಿದ್ದರು. ಈ ಹಿನ್ನೆಲೆಯಲ್ಲಿ ವಿಂಡೀಸ್ ವಿರುದ್ಧದ ಪಂದ್ಯವನ್ನು 11 ರನ್ ಗಳಿಂದ ಸೋಲಬೇಕಾಯಿತು. ಈ ಸೋಲಿಗೆ ಧೋನಿ ಅವರ ನಿಧಾನಗತಿಯ ಬ್ಯಾಟಿಂಗ್(114 ಎಸೆತಗಳಲ್ಲಿ 54 ರನ್) ಕಾರಣ ಎಂದು ಟೀಕೆಗಳು ವ್ಯಕ್ತವಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ಕೊಹ್ಲಿ ಇನ್ನಿಂಗ್ಸ್ ಕಟ್ಟುವುದನ್ನು ಧೋನಿಗೆ ಯಾರು ಹೇಳಿಕೊಡಬೇಕಿಲ್ಲ ಎಂದು ಹೇಳಿದ್ದಾರೆ.
ಧೋನಿ ಎಂತಹ ಒತ್ತಡದ ಪರಿಸ್ಥಿತಿ ಇದ್ದರೂ ಆ ಸಂದರ್ಭಕ್ಕನುಗುಣವಾಗಿ ಬ್ಯಾಟ್ ಬೀಸುತ್ತಾರೆ. ಅಂತಹ ಚತುರ ಕೌಶನ್ಯ ಧೋನಿಗಿದೆ. ಹೀಗಾಗಿ ಅವರಿಗೆ ಇನ್ನಿಂಗ್ಸ್ ಹೇಗೆ ಕಟ್ಟಬೇಕು ಎಂದು ಸಲಹೆ ನೀಡುವ ಅವಶ್ಯಕತೆ ಇಲ್ಲ ಎಂದು ಪತ್ರಕರ್ತರಿಗೆ ಕೊಹ್ಲಿ ಹೇಳಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧ ಐದು ಏಕದಿನ ಸರಣಿಯಲ್ಲಿ ಭಾರತ 3-1 ಅಂತರದಿಂದ ಸರಣಿ ಕೈವಶ ಮಾಡಿಕೊಂಡಿದೆ. ಮೊದಲ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಇನ್ನು ಎರಡನೇ ಮತ್ತು ಮೂರನೇ ಪಂದ್ಯವನ್ನು ಭಾರತ ಜಯಿಸಿತ್ತು. ನಾಲ್ಕನೇ ಪಂದ್ಯದಲ್ಲಿ 11 ರನ್ ಗಳಿಂದ ವೆಸ್ಟ್ ಇಂಡೀಸ್ ಜಯ ಗಳಿಸಿತ್ತು. ಇನ್ನು ಐದನೇ ಪಂದ್ಯವನ್ನು 8 ವಿಕೆಟ್ ಗಳಿಂದ ಭಾರತ ಜಯ ಗಳಿಸಿತ್ತು.