ಮುಂಬೈ: ಟೀಂ ಇಂಡಿಯಾ ಮಾಜಿ ಕೋಚ್ ಅನಿಲ್ ಕುಂಬ್ಳೆ ರಾಜಿನಾಮೆಯಿಂದ ತೆರವುಕೊಂಡಿರುವ ಕೋಚ್ ಹುದ್ದೆ ಸಂದರ್ಶನ ಇಂದು ನಡೆಯುತ್ತಿದ್ದು ತಂಡದ ಮಾಜಿ ನಿರ್ದೇಶಕ ರವಿಶಾಸ್ತ್ರಿ ಆಯ್ಕೆ ಬಹುತೇಕ ಖಚಿತ ಎನ್ನಲಾಗುತ್ತಿದೆ.
ಟೀಂ ಇಂಡಿಯಾ ಕೋಚ್ ಹುದ್ದೆಗೆ ಒಟ್ಟು 10 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಮಾಜಿ ಕ್ರಿಕೆಟಿಗರಾದ ವೀರೇಂದ್ರ ಸೆಹ್ವಾಗ್, ಟಾಮ್ ಮೂಡಿ, ಲಾಲ್ ಚಂದ್, ಫಿಲ್ ಸಿಮನ್ಸ್, ದೊಡ್ಡ ಗಣೇಶ್, ರಿಚರ್ಡ್ ಪೈಬಸ್ ಪ್ರಮುಖರಾಗಿದ್ದು ಅವರ ಪೈಕಿ ರವಿಶಾಸ್ತ್ರಿ ಫೇವರಿಟ್ ಆಗಿದ್ದಾರೆ. ಆದರೆ ಇದಕ್ಕೆ ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಅಡ್ಡಗಾಲು ಹಾಕುತ್ತಿದ್ದಾರೆ ಎಂದು ತಿಳಿದುಬಂದಿದೆ.
ಬಿಸಿಸಿಐ ಆಯ್ಕೆ ಸಮಿತಿಯಲ್ಲಿ ಸೌರವ್ ಗಂಗೂಲಿಯು ಒಬ್ಬರಾಗಿದ್ದು ಈ ಹಿಂದೆ ರವಿಶಾಸ್ತ್ರಿ ಕೋಚ್ ಹುದ್ದೆ ಕೈತಪ್ಪುವಂತೆ ಮಾಡಿದ್ದರು. ರವಿಶಾಸ್ತ್ರಿ ಮೇಲೆ ಗಂಗೂಲಿಗೆ ಮುನಿಸಿದೆ. ಇದೇ ಕಾರಣಕ್ಕಾಗಿ 2016ರಲ್ಲಿ ಶಾಸ್ತ್ರಿಗೆ ಕೋಚ್ ಹುದ್ದೆ ಕೈತಪ್ಪಿತ್ತು. ಈ ಸಂದರ್ಭದಲ್ಲಿ ಶಾಸ್ತ್ರಿ ಸ್ಕೈಪ್ ಮೂಲಕ ಸಂದರ್ಶನ ನೀಡಿದ್ದರು. ಇದಕ್ಕೆ ಗಂಗೂಲಿ ಆಕ್ಷೇಪ ವ್ಯಕ್ತಪಡಿಸಿದ್ದರು. ನಂತರ ದಿಗ್ಗಜರಿಬ್ಬರ ಮುನಿಸು ಸಾರ್ವಜನಿಕಗೊಂಡಿತ್ತು. ಈ ಬಾರಿ ದಾದಾ ಏನು ಮಾಡುತ್ತಾರೆ ಎಂದು ಕಾದು ನೋಡಬೇಕಿದೆ.