ನವದೆಹಲಿ: ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಮಾಜಿ ಅಧ್ಯಕ್ಷ ಅನುರಾಗ್ ಠಾಕೂರ್ ಸುಪ್ರೀಂಕೋರ್ಟ್ ಗೆ ಬೇಷರತ್ ಕ್ಷಮೆಯಾಚಿಸಿದ್ದಾರೆ.
ಅನುರಾಗ್ ಠಾಕೂರ್ ಬೇಷರತ್ ಕ್ಷಮೆಯಾಚನೆ ಹಿನ್ನೆಲೆ ಸುಪ್ರೀಂಕೋರ್ಟ್ ಅವರ ವಿರುದ್ಧದ ಪ್ರಕರಣವನ್ನು ಕೈಬಿಟ್ಟಿದೆ.
ಈ ಹಿಂದೆ ಅನುರಾಗ್ ಸಲ್ಲಿಸಿದ್ದ ಕ್ಷಮಾಪಣಾ ಅಫಿಡೇವಿಟ್ ಅನ್ನು ತಿರಸ್ಕರಿಸಿದ್ದ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ, ಎಎಂ ಖಾನ್ ವಿಲ್ಕರ್, ಡಿ ವೈ ಚಂದ್ರಚೂಡ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ಖುದ್ದು ಹಾಜರಾಗಿ ಕ್ಷಮಾಪಣೆ ಕೋರುವಂತೆ ಆದೇಶಿಸಿತ್ತು. ಅಂತೆ ಅನುರಾಗ್ ನ್ಯಾಯಾಲಯದ ಮುಂದೆ ಹಾಜರಾಗಿ ಬೇಷರತ್ ಕ್ಷಮೆಯಾಚಿಸಿದ್ದರು.
ಸುಪ್ರೀಂಕೋರ್ಟ್ ಗೆ ತಪ್ಪು ಮಾಹಿತಿ ನೀಡಿದ ಕಾರಣಕ್ಕಾಗಿ ಅನುರಾಗ್ ವಿರುದ್ಧ ಕಳೆದ ವರ್ಷ ನ್ಯಾಯಾಂಗ ನಿಂದನೆಯ ಆರೋಪ ದಾಖಲಿಸಲಾಗಿತ್ತು.