ಕ್ರಿಕೆಟ್

ಮಹಿಳಾ ತಂಡ ವಿಶ್ವಕಪ್‌ ಗೆದ್ದರೆ, 1983–2011ರ ಜಯಕ್ಕಿಂತಲೂ ದೊಡ್ಡ ಸಾಧನೆ: ಗಂಭೀರ್‌

Srinivasamurthy VN

ನವದೆಹಲಿ: ಭಾರತ ಮಹಿಳೆಯರ ತಂಡ ಭಾನುವಾರ ನಡೆಯಲಿರುವ ಇಂಗ್ಲೆಂಡ್‌ ವಿರುದ್ಧದ ಫೈನಲ್‌ ಪಂದ್ಯದಲ್ಲಿ ಗೆದ್ದು ಪ್ರಶಸ್ತಿ ಜಯಿಸಿದರೆ, ಅದು ಪುರುಷರ ತಂಡ 1983 ಮತ್ತು 2011ರ ವಿಶ್ವಕಪ್‌ ಜಯಿಸಿದ್ದಕ್ಕಿಂತಲೂ ಡೊಡ್ಡ  ಸಾಧನೆಯಾಗಲಿದೆ ಎಂದು ಭಾರತ ಕ್ರಿಕೆಟ್‌ ತಂಡದ ಆಟಗಾರ ಗೌತಮ್‌ ಗಂಭೀರ್‌ ಅಭಿಪ್ರಾಯಪಟ್ಟಿದ್ದಾರೆ.

ಕ್ರೀಡಾ ವಾಹಿನಿಯೊಂದಿಗೆ ಮಾತನಾಡಿರುವ ಗೌತಮ್ ಗಂಭೀರ್ ಅವರು, "ಐಪಿಎಲ್‌ ಮಾದರಿಯಲ್ಲಿ ಆಸ್ಟ್ರೇಲಿಯಾದಲ್ಲಿ ಆರಂಭವಾಗಿರುವ ಮಹಿಳೆಯರ ಬಿಗ್‌ ಬ್ಯಾಷ್‌ ಲೀಗ್‌ ಮಹಿಳಾ ಕ್ರಿಕೆಟ್‌ ಗೆ ದೊಡ್ಡ ಮಟ್ಟದ ಪ್ರಚಾರ  ತಂದುಕೊಟ್ಟಿದೆ. ಆದರೆ ಮಹಿಳಾ ಕ್ರಿಕೆಟ್‌ ಅನ್ನು ಬೆಂಬಲಿಸುವವರು ಬಹಳ ಸಂಖ್ಯೆಯಲ್ಲಿ ಇಲ್ಲ. ಸದ್ಯ ಭಾರತದ ಗಮನ ಸೆಳೆದಿರುವ ಮಹಿಳಾ ತಂಡ ವಿಶ್ವಕಪ್‌ ಗೆದ್ದರೆ, ಹಲವು ಹೆಣ್ಣು ಮಕ್ಕಳು ಕ್ರಿಕೆಟ್‌ ನತ್ತ ಮುಖಮಾಡಲಿದ್ದಾರೆ  ಎಂದು ಹೇಳಿದ್ದಾರೆ.

‘2011ರಲ್ಲಿ ಪುರುಷರ ತಂಡ ವಿಶ್ವಕಪ್‌ ಗೆದ್ದಾಗ ಪಂದ್ಯಾವಳಿ ಉಪಖಂಡದಲ್ಲಿ ಆಯೋಜನೆಯಾಗಿತ್ತು. ಆದರೆ ಮಹಿಳಾ ವಿಶ್ವಕಪ್‌ ಇಂಗ್ಲೆಂಡ್‌ ನಲ್ಲಿ ನಡೆಯುತ್ತಿದೆ. ಅಲ್ಲಿನ ವಾತಾವರಣ ತಂಡಕ್ಕೆ ಪೂರಕವಾಗಿರುವುದಿಲ್ಲ. ಅಲ್ಲಿ  ತಂಡವನ್ನು ಬೆಂಬಲಿಸುವವರ ಸಂಖ್ಯೆಯೂ ಕಡಿಮೆ ಇರಲಿದೆ, ಹಾಗಾಗಿ ಪರಿಸ್ಥಿತಿಗೆ ಹೊಂದಿಕೊಂಡು ಆಡಬೇಕಾದ ಸವಾಲು ತಂಡಕ್ಕಿದೆ. ಈ ಬಾರಿ ಪ್ರಶಸ್ತಿ ಜಯಿಸಿದರೆ ಅದು 1983 ಹಾಗೂ 2001ರ ವಿಶ್ವಕಪ್‌ ಗಿಂತಲೂ ದೊಡ್ಡ  ಜಯವಾಗಲಿದೆ’ ಎಂದು ಗಂಭೀರ್‌ ಹೇಳಿದ್ದಾರೆ.

ಸದ್ಯ ಎರಡನೇ ಬಾರಿ ವಿಶ್ವಕಪ್‌ ಫೈನಲ್‌ ಪ್ರವೇಶಿಸಿರುವ ಭಾರತ ಮಹಿಳಾ ತಂಡ ಲಾರ್ಡ್ಸ್‌ನಲ್ಲಿ ನಡೆಯಲಿರುವ ಅಂತಿಮ ಹಣಾಹಣಿಯ ಮೇಲೆ ಗಮನ ಹರಿಸಿದೆ. ಸೆಮಿಫೈನಲ್‌ ಪಂದ್ಯದಲ್ಲಿ ಬಲಿಷ್ಟ ಆಸ್ಟ್ರೇಲಿಯಾ ವಿರುದ್ಧ 36ರನ್‌  ಜಯ ಗಳಿಸಿರುವುದು ಮಿಥಾಲಿ ರಾಜ್‌ ಬಳಗದ ವಿಶ್ವಾಸ ಹೆಚ್ಚಿಸಿದ್ದು, ಮೊದಲ ಪ್ರಶಸ್ತಿಯ ನಿರೀಕ್ಷೆಯಲ್ಲಿದೆ. ಇದಕ್ಕೂ ಮೊದಲು 2005ರ ವಿಶ್ವಕಪ್‌ ನಲ್ಲಿ ಪ್ರಶಸ್ತಿ ಸುತ್ತಿಗೇರಿದ್ದ ಭಾರತ, ಆಸ್ಟ್ರೇಲಿಯಾ ತಂಡದೆದುರು ಸೋಲುಕಂಡಿತ್ತು.

SCROLL FOR NEXT