ಕ್ರಿಕೆಟ್

ರಾಜೀನಾಮೆ ಪತ್ರದಲ್ಲಿ ದ್ರಾವಿಡ್, ಗವಾಸ್ಕರ್, ಧೋನಿ ವಿರುದ್ಧ ಗುಹಾ ಅಸಮಾಧಾನ

Srinivas Rao BV
ನವದೆಹಲಿ: ಸುಪ್ರೀಂ ಕೋರ್ಟ್ ನೇಮಿಸಿದ ಆಡಳಿತಾಧಿಕಾರಿಗಳ ಸಮಿತಿಯ(ಸಿಒಎ) ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಕ್ರಿಕೆಟ್ ಇತಿಹಾಸಕಾರ ರಾಮಚಂದ್ರ ಗುಹಾ, ಸಿಒಎ ಮುಖ್ಯಸ್ಥ ವಿನೋದ್ ರೈ ಗೆ ಪತ್ರ ಬರೆದಿದ್ದು, ತಾವು ರಾಜೀನಾಮೆ ನೀಡುತ್ತಿರುವುದಕ್ಕೆ ಕಾರಣಗಳನ್ನು ತಿಳಿಸಿದ್ದಾರೆ. 
ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೋಹ್ಲಿ ಹಾಗೂ ಕೋಚ್ ಅನಿಲ್ ಕುಂಬ್ಳೆ ನಡುವೆ ಭಿನ್ನಾಭಿಪ್ರಾಯ ಇದೆ ಎಂಬ ವದಂತಿಗಳು ಹಬ್ಬಿತ್ತು. ಈ ಬಗ್ಗೆ ಬಿಸಿಸಿಐ ಅಧಿಕಾರಿ ಸ್ಪಷ್ಟನೆ ನೀಡಿ ಕೇವಲ ವದಂತಿಯೆಂದು ಹೇಳಿದ್ದಾರೆ. ಈ ನಡುವೆ ಗುಹಾ ಏಕಾಏಕಿ ರಾಜೀನಾಮೆ ನೀಡಿರುವುದು ಹಲವು ಪ್ರಶ್ನೆಗಳು ಉದ್ಭವಿಸುವಂತೆ ಮಾಡಿದೆ. 
ಕ್ರಿಕೆಟ್ ತಂಡದ ಮಾಜಿ ನಾಯಕ ಎಂಎಸ್ ಧೋನಿ ಟೆಸ್ಟ್ ಆವೃತ್ತಿಯಿಂದ ನಿವೃತ್ತಿಯಾಗಿದ್ದರೂ ಸಹ ಬಿಸಿಸಿಐ ಧೋನಿಗೆ ಹಾಗೂ ಇನ್ನಿತರ ಆಟಗಾರರಿಗೆ ಗ್ರೇಡ್ 1 ಕಾಂಟ್ರಾಕ್ಟ್ ನೀಡಲಾಗಿದೆ ಹಾಗೂ ಇನ್ನಿತರ ವಿಶೇಷ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ ಎಂಬುದು ಗುಹಾ ಅವರು ರಾಜೀನಾಮೆಗೆ ನೀಡಿರುವ ಕಾರಣಗಳಲ್ಲಿ ಒಂದಾಗಿದೆ. 
ಇನ್ನು ಅಂಡರ್ 19 ಕ್ರಿಕೆಟಿಗರಿಗೆ ತರಬೇತಿ ನೀಡುವ ಜವಾಬ್ದಾರಿಯನ್ನು ರಾಹುಲ್ ದ್ರಾವಿಡ್ ಗೆ ನೀಡಲಾಗಿದೆ. ಆದರೆ ಅದರ ಬಗ್ಗೆ ಗಮನ ಹರಿಸದೇ ಐಪಿಲ್ ಫ್ರಾಂಚೈಸಿ ದೆಹಲಿ ಡೇರ್ ದೆವಿಲ್ಸ್ ನತ್ತ ಹೆಚ್ಚು ಗಮನ ಹರಿಸುತ್ತಿದ್ದಾರೆ ಎಂಬುದು ರಾಮಚಂದ್ರ ಗುಹಾ ಆಕ್ಷೇಪಗಳಲ್ಲಿ ಒಂದಾಗಿದೆ. 
ಇನ್ನು ಹಿತಾಸಕ್ತಿಯ ಸಂಘರ್ಷವನ್ನು ಬಗೆಹರಿಸುವಲ್ಲಿ ವಿಫಲವಾಗಿರುವುದಕ್ಕೆ ರಾಮಚಂದ್ರ ಗುಹಾ ಬೇಸರ ಮಾಡಿಕೊಂಡಿರುವುದೂ ಸಹ ರಾಜೀನಾಮೆ ನೀಡಲು ಕಾರಣವಾಗಿದೆ ಎಂಬುದು ಅವರು ಬರೆದಿರುವ ಪತ್ರದ ಮೂಲಕ ಸ್ಪಷ್ಟವಾಗಿದೆ. ತಮ್ಮ ಪತ್ರದಲ್ಲಿ ಸುನಿಲ್ ಗವಾಸ್ಕರ್ ವಿರುದ್ಧವೂ ಅಸಮಾಧಾನ ವ್ಯಕ್ತಪಡಿಸಿರುವ ರಾಮಚಂದ್ರ ಗುಹಾ, ಕಾಮೆಂಟೇಟರ್ ಆಗಿರುವ ಸುನಿಲ್ ಗವಾಸ್ಕರ್ ಅವರನ್ನು ಬಿಸಿಸಿಐ ಪ್ಲೇಯರ್ ಮ್ಯಾನೇಜ್ ಮೆಂಟ್ ಕಂಪನಿಗೆ ಮುಖ್ಯಸ್ಥರನ್ನಾಗಿ ನೇಮಕ ಮಾಡಿದೆ ಎಂದು ಗುಹಾ ಅಸಮಾಧಾನಗೊಂಡಿದ್ದಾರೆ. 
ಇನ್ನು ಅನಿಲ್ ಕುಂಬ್ಳೆಯವರು ಪ್ರಸ್ತುತ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದರೂ ಸಹ ಬಿಸಿಸಿಐ ಹೊಸ ಕೋಚ್ ಗಾಗಿ ಸಂದರ್ಶನ ನಡೆಸ್ತುತ್ತಿರುವುದೂ ಸಹ ರಾಮಚಂದ್ರ ಗುಹಾ ಅಸಮಾಧಾನಕ್ಕೆ ಗುರಿಯಾಗಿದೆ. 
ರಾಮಚಂದ್ರ ಗುಹಾ ಅವರ ರಾಜೀನಾಮೆಗೆ ಕಾರಣವಾಗಿರುವ ಇತರ ಅಂಶಗಳು: 
  • ದೇಶಿ ಕ್ರಿಕೆಟರ್ ಗಳ ನಿರ್ಲಕ್ಷ್ಯ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟರ್ ಗಳಿಗೆ ಹೋಲಿಸಿದರೆ ಅವರಿಗೆ ಸಿಗುತ್ತಿರುವ ವೇತನ  
  • ಅನರ್ಹ ಅಧಿಕಾರಿಗಳು ಇನ್ನೂ ಬಿಸಿಸಿಐ ಸಭೆಗೆಯಲ್ಲಿ ಭಾಗವಹಿಸುತ್ತಿರುವುದು 
  • ಜಾವಗಲ್ ಶ್ರೀನಾಥ್ ಅವರನ್ನು ಸಿಒಎ ಸಮಿತಿಯಲ್ಲಿ ಇರಿಸಿಕೊಳ್ಳುವ ಪ್ರಸ್ತಾವನೆಗೆ ನಿರಾಕರಣೆ ಇವೆಲ್ಲವೂ ರಾಮಚಂದ್ರ ಗುಹಾ ಅವರು ರಾಜೀನಾಮೆ ನೀಡುವುದಕ್ಕೆ ಕಾರಣವಾಗಿರುವ ಅಂಶಗಳಾಗಿದೆ ಎಂದು ಗುಹಾ ವಿನೋದ್ ರೈಗೆ ಬರೆದಿರುವ ಪತ್ರದ ಮೂಲಕ ತಿಳಿದುಬಂದಿದೆ. 
SCROLL FOR NEXT