ಐಸಿಸಿ ಚಾಂಪಿಯನ್ಸ್ ಟ್ರೋಫಿ: ಪಾಕಿಸ್ತಾನದ ವೇಗಿ ವಹಾಬ್ ರಿಯಾಜ್ ಟೂರ್ನಿಯಿಂದ ಔಟ್!
ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾನುವಾರ ನಡೆದ ಭಾರತದ ವಿರುದ್ಧ ಪಂದ್ಯದ ವೇಳೆ ಗಾಯಗೊಂಡಿದ್ದ ಪಾಕಿಸ್ತಾನದ ವೇಗಿ ವಹಾಬ್ ರಿಯಾಜ್ ಟೂರ್ನಿಯಿಂದಲೇ ಹೊರಗುಳಿಯುವಂತಾಗಿದೆ.
ಲಂಡನ್: ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾನುವಾರ ನಡೆದ ಭಾರತದ ವಿರುದ್ಧ ಪಂದ್ಯದ ವೇಳೆ ಗಾಯಗೊಂಡಿದ್ದ ಪಾಕಿಸ್ತಾನದ ವೇಗಿ ವಹಾಬ್ ರಿಯಾಜ್ ಟೂರ್ನಿಯಿಂದಲೇ ಹೊರಗುಳಿಯುವಂತಾಗಿದೆ.
ಭಾರತದ ವಿರುದ್ಧದ ಪಂದ್ಯದಲ್ಲಿ ವಹಾಬ್ ರಿಯಾಜ್ 8.4 ಓವರ್ ಗಳನ್ನು ಎಸೆದಿದ್ದರು. ತಮ್ಮ ಪಾಲಿನ 1.2 ಓವರ್ ಬಾಕಿ ಇರುವಂತೆ ಪಾದದ ಗಾಯಕ್ಕೆ ತುತ್ತಾಗಿದ್ದ ವಹಾಬ್ ರಿಯಾಜ್ ಮೈದಾನದಿಂದ ಹೊರ ನಡೆದಿದ್ದರು. ಇದೀಗ ಅವರ ಗಾಯ ತೀವ್ರವಾಗಿದ್ದು, ಹೆಚ್ಚಿನ ಚಿಕಿತ್ಸೆ ಅಗತ್ಯವಿದೆ. ಹೀಗಾಗಿ ವಹಾಬ್ ರಿಯಾಜ್ ರನ್ನು ಟೂರ್ನಿಯಿಂದಲೇ ಕೈ ಬಿಡಲು ಪಾಕಿಸ್ತಾನ ಕ್ರಿಕೆಟ್ ತಂಡ ನಿರ್ಧರಿಸಿದೆ.
ಅಂತೆಯೇ ವಹಾಬ್ ರಿಯಾಜ್ ಬದಲಿಗೆ ಪರ್ಯಾಯ ಆಟಗಾರನ ಶೋಧಕ್ಕೂ ಚಾಲನೆ ನೀಡಲಾಗಿದೆ.
ಭಾನುವಾರ ನಡೆದ ಪಂದ್ಯದಲ್ಲಿ ವಹಾಬ್ ರಿಯಾಜ್ ಭಾರತೀಯ ಬ್ಯಾಟ್ಸಮನ್ ಗಳಿಂದ ತೀವ್ರ ದಂಡನೆಗೆ ಒಳಗಾಗಿದ್ದರು. 8.4 ಓವರ್ ಎಸೆದಿದ್ದ ವಹಾಬ್ 87 ರನ್ ನೀಡಿದ್ದರು. ಆ ಮೂಲಕ ಐಸಿಸಿ ಚಾಂಪಿನಯನ್ಸ್ ಟ್ರೋಫಿ ಇತಿಹಾಸದಲ್ಲೇ ಅತ್ಯಂತ ಕಳಪೆ ಬೌಲಿಂಗ್ ಪ್ರದರ್ಶನ ಎಂಬ ಕುಖ್ಯಾತಿಗೆ ಪಾತ್ರರಾಗಿದ್ದರು.