ಕ್ರಿಕೆಟ್

ಡಿನ್ನರ್ ಪಾರ್ಟಿಗೆ ಮಲ್ಯ ಆಗಮನ; ಅಂತರ ಕಾಯ್ದುಕೊಂಡ ಕೊಹ್ಲಿ ಪಡೆ!

Srinivasamurthy VN

ಲಂಡನ್: ಐಸಿಸಿ ಚಾಂಪಿಯನ್ಸ್ ಟ್ರೋಫಿ ವೇಳೆ ಭಾರತ-ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಹಾಜರಿದ್ದು ಭಾರಿ ಸುದ್ದಿಗೆ ಗ್ರಾಸವಾಗಿದ್ದ ಮದ್ಯದ ದೊರೆ ವಿಜಯ್ ಮಲ್ಯ ಬಳಿಕ ನಡೆದ ಕ್ರಿಕೆಟಿಗರ ಡಿನ್ನರ್ ಪಾರ್ಟಿಗೂ ಆಗಮಿಸುವ ಮೂಲಕ  ಕ್ರಿಕೆಟಿಗರ ಮುಜುಗರಕ್ಕೆ ಕಾರಣವಾಗಿದ್ದ ಅಂಶ ತಿಳಿದುಬಂದಿದೆ.

ಲಂಡನ್ ಬರ್ಮಿಂಗ್ ಹ್ಯಾಮ್ ನ ಎಡ್ಜ್ ಬ್ಯಾಸ್ಟನ್ ಕ್ರೀಡಾಂಗಣದಲ್ಲಿ ನಡೆದ ಪಾಕಿಸ್ತಾನದ ವಿರುದ್ಧದ ಪಂದ್ಯದ ಬಳಿಕ ವಿರಾಟ್ ಕೊಹ್ಲಿ ಫೌಂಡೇಷನ್ ವಿಶೇಷ ಭೋಜನ ಕೂಟ ಆಯೋಜಿಸಿತ್ತು. ಈ ಕೂಟಕ್ಕೆ ಕ್ರಿಕೆಟಿಗರು ಸೇರಿದಂತೆ  ಹಲವು ಗಣ್ಯರನ್ನು ಆಹ್ವಾನಿಸಲಾಗಿತ್ತು. ಆದರೆ ವಿಜಯ್ ಮಲ್ಯ ಅವರಿಗೆ ಯಾವುದೇ ಆಹ್ವಾನ ವಿಲ್ಲದಿದ್ದರೂ ಅವರು ಕೂಟಕ್ಕೆ ಆಗಮಿಸಿದ್ದರು. ಇದನ್ನರಿತ ಕೊಹ್ಲಿ ಮತ್ತು ತಂಡ ಯಾವುದೇ ಊಹಾಪೋಹಗಳಿಗೆ ಮತ್ತು ವಿವಾದಕ್ಕೆ ಎಡೆ  ಮಾಡಿಕೊಡಬಾರದು ಎಂದು ಸಮಯಕ್ಕೂ ಮೊದಲೇ ಅಲ್ಲಿಂದ ನಿರ್ಗಮಿಸಿದ್ದಾರೆ.

ಇನ್ನು ಈ ಬಗ್ಗೆ ಸ್ಪಷ್ಟನೆ ನೀಡಿರುವ ಕೂಟದಲ್ಲಿ ಭಾಗಿಯಾಗಿದ್ದ ಬಿಸಿಸಿಐ ಆಡಳಿತ ಮಂಡಳಿ ಸಿಬ್ಬಂದಿಯೊಬ್ಬರು, ವಿಜಯ್ ಮಲ್ಯ ಅವರಿಗೆ ಯಾವುದೇ ರೀತಿಯ ಆಹ್ವಾನ ನೀಡಿರಲಿಲ್ಲ. ಆದರೆ ಆಹ್ವಾನಿತ ಅಥಿತಿಗಳಲ್ಲಿ  ಯಾರಾದರೊಬ್ಬರು ಅವರನ್ನು ಆಹ್ವಾನಿಸಿರಬಹುದು. ಹೀಗಾಗಿ ಅವರು ಕೂಟಕ್ಕೆ ಆಗಮಿಸಿದ್ದಾರೆ ಎಂದು ಹೇಳಿದ್ದಾರೆ.

ಭಾರತೀಯ ಬ್ಯಾಂಕ್ ಗಳಿಂದ ಸುಮಾರು 9 ಸಾವಿರ ಕೋಟಿ ರು. ಸಾಲ ಪಡೆದು ವಾಪಸ್ ಮಾಡದೇ ವಿದೇಶಕ್ಕೆ ಹಾರಿರುವ ವಿಜಯ್ ಮಲ್ಯಾ ಮೇಲೆ ಭಾರತದಲ್ಲಿ ವಿಚಾರಣೆ ನಡೆಯುತ್ತಿದೆ. ಇನ್ನು ವಿಜಯ್ ಮಲ್ಯ ಒಡೆತನದ ರಾಯಲ್  ಚಾಲೆಂಜರ್ಸ್ ಬೆಂಗಳೂರು ತಂಡವನ್ನು ವಿರಾಟ್ ಕೊಹ್ಲಿ ಪ್ರತಿನಿಧಿಸುತ್ತಿದ್ದಾರೆ.

SCROLL FOR NEXT