ಕ್ರಿಕೆಟ್

ವೆಸ್ಟ್ ಇಂಡೀಸ್ ಸರಣಿಗೂ ಕುಂಬ್ಳೆ ಕೋಚ್: ಸಿಒಎ ಮುಖ್ಯಸ್ಥ ವಿನೋದ್ ರಾಯ್

Vishwanath S
ನವದೆಹಲಿ: ಟೀಂ ಇಂಡಿಯಾ ಕೋಚ್ ಅನಿಲ್ ಕುಂಬ್ಳೆ ಅವರು ಮುಂದಿನ ವೆಸ್ಟ್ ಇಂಡೀಸ್ ವಿರುದ್ಧದ ಸರಣಿವರೆಗೂ ಮುಂದುವರೆಯಲಿದ್ದಾರೆ ಎಂದು ಬಿಸಿಸಿಐ ನಿರ್ವಾಹಕ ಸಮಿತಿ ಮುಖ್ಯಸ್ಥ ವಿನೋದ್ ರಾಯ್ ಅವರು ಸ್ಪಷ್ಟಪಡಿಸಿದ್ದಾರೆ. 
ಕ್ರಿಕೆಟ್ ಸಲಹಾ ಸಮಿತಿ ಟೀಂ ಇಂಡಿಯಾ ಕೋಚ್ ಆಯ್ಕೆ ಮಾಡಬೇಕಿದ್ದು, ಸದ್ಯ ಪ್ರಧಾನ ಕೋಚ್ ಆಗಿ ಸಲಹಾ ಸಮಿತಿ ಇನ್ನು ಯಾರನ್ನು ಆಯ್ಕೆ ಮಾಡಿಲ್ಲದ ಕಾರಣ ಅನಿಲ್ ಕುಂಬ್ಳೆ ಅವರೇ ವೆಸ್ಟ್ ಇಂಡೀಸ್ ಸರಣಿಗೂ ಮುಂದುವರೆಯುತ್ತಾರೆ ಎಂದು ವಿನೋದ್ ರಾಯ್ ಅವರು ಹೇಳಿದ್ದಾರೆ. 
ಜೂನ್ 23ರಿಂದ ಭಾರತ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಳ್ಳಲಿದ್ದು ಅತಿಥೇಯ ತಂಡದ ವಿರುದ್ಧ ಟೀಂ ಇಂಡಿಯಾ ಐದು ಏಕದಿನ ಪಂದ್ಯಗಳ ಸರಣಿ ಮತ್ತು ಜೂಲೈ 9 ರಂದು ಒಂದು ಟಿ20 ಪಂದ್ಯವನ್ನು ಆಡಲಿದೆ. 
ಸದ್ಯ ಚಾಂಪಿಯನ್ಸ್ ಟ್ರೋಫಿ ಹಿನ್ನೆಲೆ ಟೀಂ ಇಂಡಿಯಾ ಲಂಡನ್ ಪ್ರವಾಸಗೊಂಡಿದ್ದು ಸಲಹಾ ಸಮಿತಿ ಸದಸ್ಯರಾದ ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ ಮತ್ತು ವಿವಿಎಸ್ ಲಕ್ಷ್ಮಣ್ ಲಂಡನ್ ನಲ್ಲಿ ಬಿಡು ಬಿಟ್ಟಿದ್ದು ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಕೋಚ್ ಅನಿಲ್ ಕುಂಬ್ಳೆ ಜತೆ ಸಂಪರ್ಕದಲ್ಲಿದ್ದಾರೆ. 
ಕಳೆದ ವರ್ಷದ ಅನಿಲ್ ಕುಂಬ್ಳೆ ಅವರನ್ನು ಟೀಂ ಇಂಡಿಯಾದ ಕೋಚ್ ಆಗಿ ಆಯ್ಕೆ ಮಾಡಿಕೊಳ್ಳಲಾಗಿತ್ತು. ಅನಿಲ್ ಕುಂಬ್ಳೆ ಜತೆ ಒಂದು ವರ್ಷಕ್ಕೆ ಒಪ್ಪಂದ ಮಾಡಿಕೊಳ್ಳಲಾಗಿದ್ದು ಪ್ರಸ್ತುತ ಚಾಂಪಿಯನ್ಸ್ ಟ್ರೋಫಿ ನಂತರ ಕುಂಬ್ಳೆ ಅವರ ಒಪ್ಪಂದ ಮುಕ್ತಾಯವಾಗಲಿದೆ. ಇನ್ನು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ತಂಡದ ಸಹ ಆಟಗಾರರಲ್ಲಿ ಕೋಚ್ ಅನಿಲ್ ಕುಂಬ್ಳೆ ಪರ ಒಲವು ಕಡಿಮೆಯಾಗಿದ್ದು ಕೋಚ್ ಅವರನ್ನು ಬದಲಿಸಬೇಕೆಂಬ ಒತ್ತಡ ಬಿಸಿಸಿಐ ಮೇಲಿದೆ. ಅಂತೆ ಬಿಸಿಸಿಐ ನೂತನ ಕೋಚ್ ಹುದ್ದೆಗಾಗಿ ಅರ್ಜಿಗಳನ್ನು ಆಹ್ವಾನಿಸಿತ್ತು. 
SCROLL FOR NEXT