ಕೋಚ್ ಇಲ್ಲದೆ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗೆ ಸಜ್ಜಾದ ಟೀಂ ಇಂಡಿಯಾ
ಮುಖ್ಯ ಕೋಚ್ ಇಲ್ಲದೆ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಪಂದ್ಯಕ್ಕೆ ಟೀಂ ಇಂಡಿಯಾ ಸಜ್ಜಾಗಿದೆ. ಚಾಂಪಿಯನ್ಸ್ ಟ್ರೋಫಿ ಹೀನಾಯ ಸೋಲಿನ ಬಳಿಕ ವಿರಾಟ್ ಕೊಹ್ಲಿ
ಪೋರ್ಟ್ ಆಫ್ ಸ್ಪೇನ್: ಮುಖ್ಯ ಕೋಚ್ ಇಲ್ಲದೆ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಪಂದ್ಯಕ್ಕೆ ಟೀಂ ಇಂಡಿಯಾ ಸಜ್ಜಾಗಿದೆ. ಚಾಂಪಿಯನ್ಸ್ ಟ್ರೋಫಿ ಹೀನಾಯ ಸೋಲಿನ ಬಳಿಕ ವಿರಾಟ್ ಕೊಹ್ಲಿ ಪಡೆ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಕ್ರಿಕೆಟ್ ಸರಣಿ ಗೆಲ್ಲುವ ಛಲದಲ್ಲಿದೆ.
ಇದೇ ಮೊದಲ ಬಾರಿಗೆ ಟೀಂ ಇಂಡಿಯಾ ತಂಡದ ಕೋಚ್ ಇಲ್ಲದೆ ಪ್ರವಾಸವೊಂದನ್ನು ಕೈಗೊಂಡಿದೆ. ವಿರಾಟ್ ಕೊಹ್ಲಿ ಮತ್ತು ಅನಿಲ್ ಕುಂಬ್ಳೆ ನಡುವಿನ ಮನಸ್ತಾಪದಿಂದಾಗಿ ಕುಂಬ್ಳೆ ಅವರು ಕೋಚ್ ಹುದ್ದೆಗೆ ದಿಢೀರ್ ರಾಜಿನಾಮೆ ನೀಡಿದ್ದರು. ಇದರಿಂದ ಬಿಸಿಸಿಐ ಕೋಚ್ ಆಯ್ಕೆ ಮಾಡಲು ಸಾಧ್ಯವಾಗಿಲ್ಲ. ಸದ್ಯ ವೆಸ್ಟ್ ಇಂಡೀಸ್ ನಲ್ಲಿ ಬೀಡು ಬಿಟ್ಟಿರುವ ಟೀಂ ಇಂಡಿಯಾ ಆಟಗಾರರು ಕೋಚ್ ಇಲ್ಲದೆ ಅಭ್ಯಾಸದಲ್ಲಿ ತೊಡಗಿದೆ.
ಇನ್ನು ಮುಖ್ಯ ಕೋಚ್ ಇಲ್ಲದೆ ತಂಡದಲ್ಲಿ ಯೋಜನೆ ರೂಪಿಸಿ ಜಾರಿಗೊಳಿಸುವ ಸಂಪೂರ್ಣ ಜವಾಬ್ದಾರಿ ನಾಯಕ ವಿರಾಟ್ ಕೊಹ್ಲಿ ಮೇಲಿದೆ. ಇದರಿಂದಾಗಿ ಈ ಟೂರ್ನಿ ಕೊಹ್ಲಿಗೆ ಅಗ್ನಿಪರೀಕ್ಷೆಯಾಗಿದೆ.
ಇನ್ನು ವೆಸ್ಟ್ ಇಂಡೀಸ್ ವಿರುದ್ಧ ಏಕ ದಿನ ಪಂದ್ಯ ಇಂದು ಕ್ವೀನ್ಸ್ ಪಾರ್ಕ್ ಓವೆಲ್ ನಲ್ಲಿ ನಡೆಯಲಿದೆ. 2013ರಲ್ಲಿ ಟೀಂ ಇಂಡಿಯಾ ಈ ಮೈದಾನದಲ್ಲಿ ಕೊನೆಯ ಬಾರಿಗೆ ಏಕದಿನ ಪಂದ್ಯವನ್ನಾಡಿತ್ತು.