ಪೋರ್ಟ್ ಆಫ್ ಸ್ಪೇನ್: ಶನಿವಾರದಿಂದ ಭಾರತ ಮತ್ತು ವಿಂಡೀಸ್ ತಂಡಗಳ ನಡುವಿನ ಏಕದಿನ ಸರಣಿ ಆರಂಭವಾಗಿದ್ದು, ಕ್ವೀನ್ಸ್ ಪಾರ್ಕ್ ಕ್ರೀಡಾಂಗಣದಲ್ಲಿ ನಡೆದ ಮೊದಲ ಪಂದ್ಯವೇ ಮಳೆಯಿಂದಾಗಿ ರದ್ದಾಗಿದೆ.
ಪೋರ್ಟ್ ಆಪ್ ಸ್ಪೈನ್ ನ ಕ್ವೀನ್ಸ್ ಪಾರ್ಕ್ ಕ್ರೀಡಾಂಗಣ ಇಂದು ಪಂದ್ಯ ಆರಂಭವಾಯಿತಾದರೂ ಭಾರತದ ಇನ್ನಿಂಗ್ಸ್ 40ನೇ ಓವರ್ ನ ವೇಳೆ ಮಳೆ ಆರಂಭವಾಗಿದ್ದರಿಂದ ಪಂದ್ಯವನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ ಬಳಿಕ ಮಳೆ ನಿಂತಿತಾದರೂ ಪಂದ್ಯ ಪುನಾರಂಭ ಮಾಡಲು ಮೈದಾನದ ತೇವಾಂಶ ಅಡ್ಡಿಯಾಗಿತ್ತು. ಹೀಗಾಗಿ ಬೇರೆ ವಿಧಿಯಿಲ್ಲದೆ ಪಂದ್ಯವನ್ನು ಅಂಪೈರ್ ಗಳು ರದ್ದುಗೊಳಿಸಿದ್ದಾರೆ.
ಇದಕ್ಕೂ ಮೊದಲು ಟಾಸ್ ಗೆದ್ದ ವಿಂಡೀಸ್ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಭಾರತ ತಂಡಕ್ಕೆ ಆರಂಭಿಕ ಆಟಗಾರರಾದ ಶಿಖರ್ ಧವನ್ ಹಾಗೂ ಅಜಿಂಕ್ಯ ರಹಾನೆ ಉತ್ತಮ ಆರಂಭ ಒದಗಿಸಿದರು. ಧವನ್ 92 ಎಸೆತಗಳಿಂದ 8 ಬೌಂಡರಿ, 2 ಸಿಕ್ಸರ್'ಗಳಿಂದ 87 ರನ್ ಗಳಿಸಿ ಕೇವಲ 13 ರನ್‌ಗಳಿಂದ ಶತಕ ವಂಚಿತರಾದರು.
ಜೊತೆಗಾರ ರಹಾನೆ ಕೂಡ 78 ಎಸೆತಗಳಲ್ಲಿ 8 ಬೌಂಡರಿಗಳೊಂದಿಗೆ 62 ರನ್ ಚಚ್ಚಿದರು. ನಾಲ್ಕನೆ ಕ್ರಮಾಂಕದಲ್ಲಿ ಆಟ ಆರಂಭಿಸಿದ ಯುವರಾಜ್ ಸಿಂಗ್ ಕೇವಲ 4 ರನ್'ಗಳಿಗೆ ಹೋಲ್ಡರ್'ಗೆ ವಿಕೇಟ್ ಒಪ್ಪಿಸಿದರು. ಮಳೆ ಆರಂಭಕ್ಕೂ ಮುನ್ನ ನಾಯಕ ಕೊಹ್ಲಿ 47 ಎಸತಗಳಿಂದಿಗೆ 32 ಹಾಗೂ ಧೋನಿ 9 ಎಸತಗಳೊಂದಿಗೆ 9 ರನ್'ಗಳಿಸಿ ಆಡುತ್ತಿದ್ದರು. 39.2 ಓವರ್'ಗಳಲ್ಲಿ 199/3 ರನ್ ಗಳಿಸಿದಾಗ ವರುಣ ಪಂದ್ಯಕ್ಕೆ ಅಡ್ಡಿಯಾದ.