ಸೇನಾ ಯೋಧರು ಹಾಗೂ ಭಾರತ ತಂಡ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ (ಸಂಗ್ರಹ ಚಿತ್ರ)
ನವದೆಹಲಿ: ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ದೇಶ ಕಾಯುವ ಯೋಧರ ಕುರಿತಂತೆ ಐಕ್ಯಮತ್ಯ ತೋರ್ಪಡಿಸಿರುವ ಭಾರತ ತಂಡದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಅವರು, ಯೋಧರನ್ನು ಎಲ್ಲಿಯೇ ಆದರೂ, ಯಾವ ಸಮಯದಲ್ಲಿಯೋ ಆದರೂ ನೋಡಿದರೂ ಅವರಿಗೆ ಸೆಲ್ಯೂಟ್ ಹೊಡೆಯಿರಿ ಎಂದು ತಮ್ಮ ಅಭಿಮಾನಿಗಳಿಗೆ ಕರೆ ನೀಡಿದ್ದಾರೆ.
ಭಾರತೀಯ ಯೋಧರ ತ್ಯಾಗ ಹಾಗೂ ಬಲಿದಾನ ಕುರಿತಂತೆ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ದೇಶದ ರಕ್ಷಣೆಗಾಗಿ ಯೋಧರು ಮಾಡುತ್ತಿರುವ ಸಾಹಸಮಯ ಕಾರ್ಯವೊಂದರ ವಿಡಿಯೋವೊಂದನ್ನು ಹಾಕುವ ಮೂಲಕ, ದೇಶ ಕಾಯುವ ಯೋಧರನ್ನು ಎಲ್ಲಿ ಹಾಗೂ ಯಾವುದೇ ಸಮಯದಲ್ಲಿ ನೋಡಿದರೂ ಅವರಿಗೆ ಸೆಲ್ಯೂಟ್ ಹೊಡೆಯಿರಿ ಎಂದು ಹೇಳಿದ್ದಾರೆ.
ಸ್ವಾರ್ಥತೆಯಿಲ್ಲದೆಯೇ, ತನ್ನ ತ್ಯಾಗಕ್ಕೆ ಬದಲಾಗಿ ಯಾವುದನ್ನೂ ನಿರೀಕ್ಷೆ ಮಾಡದ ತಾಯಿಗಿಂತಲೂ ನಮ್ಮ ಯೋಧರು ಹೆಚ್ಚು. ವಿಶ್ವದಲ್ಲಿಯೇ ಅತ್ಯುತ್ತಮ ಸೇನೆಗೆ ಪ್ರೀತಿ ಹಾಗೂ ಗೌರವವನ್ನು ನೀಡಿ. ಜೈ ಹಿಂದ್! ಎಂದು ತಿಳಿಸಿದ್ದಾರೆ.
ಸೆಹ್ವಾಗ್ ಅವರ ಈ ಟ್ವೀಟ್ ಗೆ ಸಾಕಷ್ಟು ಅಭಿಮಾನಿಗಳು ಮೆಚ್ಚುಗೆಗಳು ವ್ಯಕ್ತಪಡಿಸಿದ್ದು, ಭಾರತೀಯ ಸೇನೆಯನ್ನು ಕೊಂಡಾಡುತ್ತಿದ್ದಾರೆ.