ಕೊಚ್ಚಿ: ಭಾರತದ ಮಾಜಿ ವೇಗಿ ಎಸ್ ಶ್ರೀಶಾಂತ್ ಮೇಲಿನ ಆಜೀವ ನಿಷೇಧ ಶಿಕ್ಷೆಯನ್ನು ತೆರವುಗೊಳಿಸುವ ಕುರಿತಾಗಿ ಕೇರಳ ಹೈಕೋರ್ಟ್ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಗೆ ನೋಟಿಸ್ ನೀಡಿದೆ.
ಶ್ರೀಶಾಂತ್ ತಮ್ಮ ಮೇಲಿನ ಆಜೀವ ನಿಷೇಧ ಶಿಕ್ಷೆಯನ್ನು ಹಿಂಪಡೆಯುವಂತೆ ಮಂಡಳಿಗೆ ಸೂಚಿಸಬೇಕೆಂದು ಬುಧವಾರ ಹೈಕೋರ್ಟ್ ಮೆಟ್ಟಿಲೇರಿದ್ದರು. ಪ್ರಕರಣದ ಮುಂದಿನ ವಿಚಾರಣೆ ಮರ್ಚ್ 5ಕ್ಕೆ ನಡೆಯಲಿದೆ. ಬಿಸಿಸಿಐನಿಂದ ನಿರಾಕ್ಷೇಪಣಾ ಪತ್ರ ಸಿಕ್ಕರೆ ಶ್ರೀಶಾಂತ್ ಸ್ಕಾಟ್ಲೆಂಡ್ ನ ಕ್ಲಬ್ ತಂಡದ ಪರ ಆಡಲಿದ್ದಾರೆ.
2013ರ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಕ್ರಿಕೆಟಿಗರಾದ ಶ್ರೀಶಾಂತ್, ಅಂಕಿತ್ ಚೌವಾಣ್ ಹಾಗೂ ಅಜಿತ್ ಚಂಡಿಲ ಸೇರಿದಂತೆ 36 ಮಂದಿ ವಿರುದ್ಧ ಆರೋಪವನ್ನು ಪಟಿಯಾಲಾ ಹೌಸ್ ಕೋರ್ಟ್ 2015ರ ಜುಲೈನಲ್ಲಿ ಖುಲಾಸೆಗೊಳಿಸಿತ್ತು. ಆದರೆ ಬಿಸಿಸಿಐ ಶಿಸ್ತು ಸಮಿತಿ ಈ ಮೂವರು ಆಟಗಾರರಿಗೆ ಆಜೀವ ನಿಷೇಧ ಶಿಕ್ಷೆಯನ್ನು ನೀಡಿತ್ತು.