ಧರ್ಮಶಾಲಾ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಕ್ರಿಕೆಟ್ ಸರಣಿ ಹಲವು ವಿದ್ಯಮಾನಗಳಿಗೆ ಸಾಕ್ಷಿಯಾಗಿದ್ದು, ಈ ಸರಣಿಗೆ ಸ್ಮಿತ್ ಪಡೆಯ ಸಂಭ್ರಮಾಚರಣೆ ಮತ್ತೊಂದು ಸೇರ್ಪಡೆಯಾಗಿದೆ.
ಧರ್ಮಶಾಲಾ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಿನ್ನೆ ಟಾಸ್ ಗೆದ್ದ ಆಸಿಸ್ ಪಡೆ 300 ರನ್ ಗಳಿಗೆ ಅಲ್ ಔಟ್ ಆಗಿತ್ತು. ಇದಕ್ಕೂ ಮೊದಲು ತಂಡ 8 ವಿಕೆಟ್ ಕಳೆದುಕೊಂಡಿದ್ದಾಗ ಕ್ರೀಸ್ ನಲ್ಲಿದ್ದ ಆಸಿಸ್ ಆಟಗಾರ ಮ್ಯಾಥ್ಯೂವೇಡ್ 47 ರನ್ ಆಡುತ್ತಿದ್ದರು. ಈ ವೇಳೆ ಅಶ್ವಿನ್ ಎಸೆದ ಎಸೆತವನ್ನು ರಕ್ಷಣಾತ್ಮಕವಾಗಿ ಆಡಿದರು. ಚೆಂಡು ವೇಡ್ ಪ್ಯಾಡ್ ಸವರಿ ಹಿಂಬದಿಯಿಂದ ಬೌಂಡರಿ ಲೈನ್ ದಾಟಿತ್ತು. ಇದನ್ನು ವೇಡ್ ಬ್ಯಾಟ್ ನಿಂದ ಸಿಡಿದ ರನ್ ಗಳು ಎಂದು ಭಾವಿಸಿದ ಆಸಿಸ್ ಆಟಗಾರರು ವೇಡ್ ಅರ್ಧಶತಕ ಪೂರೈಸಿದ್ದಾರೆ ಎಂದು ತಿಳಿದು ಚಪ್ಪಾಳೆ ತಟ್ಟಿ ಸಂಭ್ರಮಾಚರಣೆ ಮಾಡಿದರು.
ಆದರೆ ಕೂಡಲೇ ಅಂಪೈರ್ ಅದನ್ನು ಲೆಗ್ ಬೈ ಎಂದು ಘೋಷಿಸುವುದರೊಂದಿಗೆ ಸಂಭ್ರಮಾಚರಣೆಯಲ್ಲಿ ತೊಡಗಿದ್ದ ಆಸಿಸ್ ಆಟಗಾರರು ಬೇಸ್ತು ಬಿದ್ದು, ಸಂಭ್ರಮಾಚರಣೆ ನಿಲ್ಲಿಸಿದರು. ಇದು ಅಲ್ಲಿ ನೆರೆದಿದ್ದ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿತು.
ಇದೀಗ ಈ ವಿಡಿಯೋ ವೈರಲ್ ಆಗಿದ್ದು, ಫೇಸ್ ಬುಕ್ ನಲ್ಲಿ ವ್ಯಾಪಕ ಶೇರ್ ಆಗುತ್ತಿದೆ.