ಎಬಿಡಿ ವಿಲಿಯರ್ಸ್, ವಿರಾಟ್ ಕೊಹ್ಲಿ
ಬೆಂಗಳೂರು: ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ ವೇಳೆ ಭುಜದ ಗಾಯಕ್ಕೆ ತುತ್ತಾಗಿರುವ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಇಂಡಿಯನ್ ಪ್ರಿಮಿಯರ್ ಲೀಗ್ ನ ಕೆಲ ಪಂದ್ಯಗಳಿಗೆ ಅಲಭ್ಯರಾಗಲಿದ್ದು ಕೊಹ್ಲಿ ಬದಲಿಗೆ ಎಬಿಡಿ ವಿಲಿಯರ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸಾರಥ್ಯವನ್ನು ವಹಿಸಿಕೊಳ್ಳಲಿದ್ದಾರೆ.
ಆರ್ಸಿಬಿ ತಂಡದ ಪ್ರಧಾನ ಕೋಚ್ ಆಗಿರುವ ಡೇನಿಯಲ್ ವೆಟ್ಟೋರಿ ಸುದ್ದಿಗಾರರೊಂದಿಗೆ ಮಾತನಾಡಿದ್ದು ಈ ವೇಳೆ ವಿರಾಟ್ ಏಪ್ರಿಲ್ 2ರಂದು ತಂಡವನ್ನು ಕೂಡಿಕೊಳ್ಳಲಿದ್ದಾರೆ. ಆದರೆ ಈವರೆಗೂ ಅವರ ಫಿಟ್ನೆಸ್ ಕುರಿತು ನಮಗೆ ಖಚಿತ ಮಾಹಿತ ಇಲ್ಲ. ಕೊಹ್ಲಿ ಆಗಮಿಸಿದ ಬಳಿಕ ತಂಡದ ವೈದ್ಯರು ಹಾಗೂ ಫಿಸಿಯೋ ಅವರ ದೈಹಿಕ ಸಾಮರ್ಥ್ಯವನ್ನು ಪರಿಶೀಲಿಸಲಿದ್ದಾರೆ. ಆನಂತರ ನಮಗೆ ಅವರ ಆಟದ ಬಗ್ಗೆ ಸ್ಫಷ್ಟ ಚಿತ್ರಣ ಸಿಗಲಿದೆ ಎಂದು ಹೇಳಿದ್ದಾರೆ.
ಕಳೆದ ಆವೃತ್ತಿಯ ವಿಜೇತ ತಂಡದ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ರನ್ನರ್ ಅಪ್ ಆರ್ಸಿಬಿ ತಂಡ ಮೊದಲ ಪಂದ್ಯದಲ್ಲಿ ಸೆಣಸಲಿವೆ. ಹೀಗಾಗಿ ಅಭ್ಯಾಸ ಆರಂಭಿಸಿರುವ ಆರ್ಸಿಬಿ ಆಟಗಾರರಾದ ಯುಜುವೇಂದ್ರ ಚಾಹಲ್, ವೇಗಿ ಎಸ್ ಅರವಿಂದ್ ಸೇರಿದಂತೆ ಹಲವು ಗುರುವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ತಾಲೀಮು ನಡೆಸಿದರು. ಏಪ್ರಿಲ್ 5ರ ಉದ್ಘಾಟನಾ ಪಂದ್ಯದಲ್ಲಿ ಉಭಯ ತಂಡಗಳು ಸೆಣೆಸಲಿವೆ.