ದುಬೈ: ಇಂಗ್ಲೆಂಡ್ ನಲ್ಲಿ ಜೂನ್ 1ರಿಂದ ಆರಂಭಗೊಳ್ಳಲಿರುವ ಚಾಂಪಿಯನ್ಸ್ ಟ್ರೋಫಿಗೆ ದಿನಗಣನೆ ಶುರುವಾಗಿದ್ದು ಈ ಮಧ್ಯೆ ಚಾಂಪಿಯನ್ಸ್ ಟ್ರೋಫಿ ವಿಜೇತರಿಗೆ 2.2 ಮಿಲಿಯನ್ ಡಾಲರ್ ನಗದು ಬಹುಮಾನವನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಘೋಷಿಸಿದೆ.
ಟೂರ್ನಿಯಲ್ಲಿ ಎಂಟು ತಂಡಗಳು ಚಾಂಪಿಯನ್ ಪಟ್ಟಕ್ಕಾಗಿ ಸೆಣಸಲಿವೆ. ಒಟ್ಟಾರೆ ಐಸಿಸಿ ಚಾಂಪಿಯನ್ಸ್ ಟ್ರೋಫಿಗಾಗಿ 4.5 ಮಿಲಿಯನ್ ಡಾಲರ್ ನಗದು ಬಹುಮಾನ ಘೋಷಿಸಿದೆ. ವಿಜೇತ ತಂಡಕ್ಕೆ 2.2 ಮಿಲಿಯನ್ ಡಾಲರ್ ಆದರೆ, ರನ್ನರ್ ಅಪ್ ತಂಡಕ್ಕೆ 1.1 ಮಿಲಿಯನ್ ಡಾಲರ್, ಸೆಮಿಫೈನಲ್ ನಲ್ಲಿ ಸೆಣೆಸುವ ಉಭಯ ತಂಡಗಳು 450,000 ಡಾಲರ್, ಗುಂಪಿನಲ್ಲಿ ಅಗ್ರ ಮೂರನೇ ಸ್ಥಾನದಲ್ಲಿರುವ ತಂಡಗಳು 90,000 ಡಾಲರ್ ಮತ್ತು ಕೊನೆಯ ಸ್ಥಾನದಲ್ಲಿರುವ ತಂಡಗಳು 60,000 ಡಾಲರ್ ನಗದು ಬಹುಮಾನ ಪಡೆಯಲಿವೆ.
ಜೂನ್ 1ರಂದು ಇಂಗ್ಲೆಂಡ್ ಮತ್ತು ಬಾಂಗ್ಲಾದೇಶ ನಡುವೆ ಉದ್ಘಾಟನಾ ಪಂದ್ಯ ನಡೆಯಲಿದ್ದು ಜೂನ್ 4ರಂದು ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ.