ಪಾಕಿಸ್ತಾನ ಕ್ರಿಕೆಟ್ ತಂಡದ ಆಯ್ಕೆ ಸಮಿತಿ ಮುಖ್ಯಸ್ಥ ಇಂಜಮಾಮ್-ಉಲ್-ಹಕ್
ಕರಾಚಿ: ಚಾಂಪಿಯನ್ ಟ್ರೋಫಿ ಗೆಲ್ಲುವುದಷ್ಟೇ ಪಾಕಿಸ್ತಾನದ ಮುಖ್ಯ ಗುರಿಯಾಗಿದ್ದು, ಭಾರತವನ್ನು ಸೋಲಿಸುವುದಲ್ಲ ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ಆಯ್ಕೆ ಸಮಿತಿ ಮುಖ್ಯಸ್ಥ ಇಂಜಮಾಮ್-ಉಲ್-ಹಕ್ ಅವರು ಬುಧವಾರ ಹೇಳಿದ್ದಾರೆ.
ಜೂನ್.1ರಿಂದ ಚಾಂಪಿಯನ್ಸ್ ಟ್ರೋಫಿ ಇಂಗ್ಲೆಂಡ್ ನಲ್ಲಿ ಆರಂಭವಾಗಲಿದೆ. ಆರಂಭವಾಗಲಿರುವ ಈ ಕೂಟದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಬಿ ಗುಂಪಿನಲ್ಲಿ ಸ್ಥಾನ ಪಡೆದಿವೆ. ಹೀಗಾಗಿ ಭಾರತ ಮೊದಲ ಪಂದ್ಯವನ್ನು ಜೂ.4ರಂದು ಪಾಕಿಸ್ತಾನದೊಂದಿಗೆ ಆರಂಭ ಮಾಡಲಿದೆ.
ಗಡಿಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಭಾರತ ಮತ್ತು ಪಾಕಿಸ್ತಾನ ನಡುವಿನ ರಾಜಕೀಯ ವಾತಾವರಣ ಹದಗೆಟ್ಟ ಕಾರಣ ಅದು ಕ್ರಿಕೆಟ್ ಮೇಲೆಯೂ ಗಂಭೀರ ಪರಿಣಾಮ ಬೀರಿದೆ. ಇನ್ನೇನು ಸರಿ ಹೋಗಿದೆ ಎನ್ನುತ್ತಿದ್ದಂತೆಯೇ ಮತ್ತೊಂದು ಸಮಸ್ಯೆ, ವಿವಾದಗಳು ಹುಟ್ಟಿಕೊಳ್ಳುತ್ತವೆ. ಹೀಗಾಗಿ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗುವುದು ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿಗಳಲ್ಲಿ ಮಾತ್ರವಾಗಿದೆ. ಸಮಸ್ಯೆ, ವಿವಾದಗಳ ನಡುವೆಯೂ ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ಮೂಲಕ ಮುಖಾಮುಖಿಯಾಗುತ್ತಿರುವ ಹಿನ್ನಲೆಯಲ್ಲಿ ಎರಡೂ ರಾಷ್ಟ್ರಗಳ ಅಭಿಮಾನಿಗಳಲ್ಲಿ ಕ್ರೇಜ್ ಸೃಷ್ಟಿಯಾಗಿದೆ. ಈ ನಡುವೆ ಬೆಟ್ಟಿಂಗ್ ದಂಧೆಗಳೂ ಕೂಡ ಜೋರಾಗಿ ನಡೆಯುತ್ತಿವೆ.
ಭಾರತ ಮತ್ತು ಪಾಕಿಸ್ತಾನ ನಡುವಣ ಪಂದ್ಯಾವಳಿ ನಡೆಯುತ್ತಿರುವ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಇಂಜಮಾಮ್ ಉಲ್ ಹಕ್ ಅವರು, ಭಾರತವನ್ನು ಸೋಲಿಸುವ ಸಲುವಾಗಿ ನಾವು ಇಂಗ್ಲೆಂಡ್ ಗೆ ಹೋಗುತ್ತಿಲ್ಲ. ನಮ್ಮ ಗುರಿ ಕೇವಲ ಚಾಂಪಿಯನ್ ಟ್ರೋಫಿ ಗೆಲ್ಲುವುದಷ್ಟೇ ಎಂದು ತಿಳಿಸಿದ್ದಾರೆ.