ಅಭಿಮಾನಿಗೆ "ಸೊಗಸಾದ ಆಟಗಾರ" ಟ್ರೋಫಿ ಉಡುಗೊರೆ ನೀಡಿದ ಕೊಹ್ಲಿ!
ನವದೆಹಲಿ: ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯಲ್ಲಿ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡ ಹೀನಾಯ ಪ್ರದರ್ಶನದ ಹೊರತಾಗಿಯೂ ಅಭಿಮಾನಿಗಳ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.
ಇದಕ್ಕೆ ಉದಾಹರಣೆ ಎಂಬಂತೆ ಇತ್ತೀಚೆಗೆ ಆರ್ ಸಿಬಿ ಆಟಗಾರರು ಟೂರ್ನಿಯುದ್ದಕ್ಕೂ ತಮಗೆ ಸಿಕ್ಕ ಬೆಂಬಲವನ್ನು ಮುಕ್ತ ಕಂಠದಿಂದ ಶ್ಲಾಘಿಸಿದ್ದರು. ಇದೀಗ ಅಭಿಮಾನಿಗಳ ಅಭಿಮಾನಕ್ಕೆ ಪ್ರತಿಯಾಗಿ ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿ ಉಡುಗೊರೆ ನೀಡಿದ್ದು, ಸರಣಿಯ ತಮ್ಮ ಕೊನೆಯ ಪಂದ್ಯದಲ್ಲಿ ತಾವು ಗೆದ್ದ "ಸೊಗಸಾದ ಆಟಗಾರ" ಪ್ರಶಸ್ತಿ ಟ್ರೋಫಿಯನ್ನು ವಿರಾಟ್ ಕೊಹ್ಲಿ ಆರ್ ಸಿಬಿ ಅಭಿಮಾನಿಯೊಬ್ಬರಿಗೆ ನೀಡಿದ್ದಾರೆ.
ದೆಹಲಿಯ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಮುಕ್ತಾಯವಾಗುತ್ತಿದ್ದಂತೆಯೇ ಗ್ಯಾಲರಿಯಲ್ಲಿ ಕುಳಿತಿದ್ದ ಆರ್ ಸಿಬಿ ಅಭಿಮಾನಿಯತ್ತ ಧಾವಿಸಿದ ಕೊಹ್ಲಿ ಅಲ್ಲಿದ್ದ ಜಾಹಿರಾತು ಫಲಕಗಳನ್ನು ದಾಟಿ ಅಭಿಮಾನಿಯೊಬ್ಬರಿಗೆ ಟ್ರೋಫಿ ನೀಡಿ ತಮ್ಮ ಅಭಿಮಾನ ಮೆರೆದಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗಿದ್ದು, ಕೊಹ್ಲಿ ನಡೆಗೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ.
ಅಂದಹಾಗೆ ಆ ಪಂದ್ಯದಲ್ಲಿ ಆರ್ ಸಿಬಿ ತಂಡ ದೆಹಲಿ ತಂಡವನ್ನು 10 ರನ್ ಗಳ ಅಂತರದಲ್ಲಿ ಮಣಿಸಿತ್ತು. ಈ ಪಂದ್ಯದಲ್ಲಿ ಕೊಹ್ಲಿ 58 ರನ್ ಸಿಡಿಸಿ ತಂಡದ ಸವಾಲಿನ ಮೊತ್ತಕ್ಕೆ ಕಾರಣರಾಗಿದ್ದರು.