ಕ್ರಿಕೆಟ್

ಚಾಂಪಿಯನ್ಸ್ ಟ್ರೋಫಿ: ಭಾರತದ ಬೌಲಿಂಗ್ ದಾಳಿಗೆ ತತ್ತರಿಸಿದ ಕಿವೀಸ್!

Srinivasamurthy VN

ಲಂಡನ್: ಲಂಡನ್ ನಲ್ಲಿ ನಡೆಯುತ್ತಿರುವ ಚಾಂಪಿಯನ್ಸ್ ಟ್ರೋಫಿ ಆಭ್ಯಾಸ ಪಂದ್ಯದಲ್ಲಿ ಭಾರತದ ಬೌಲಿಂಗ್ ದಾಳಿಗೆ ತತ್ತರಿಸಿರುವ ನ್ಯೂಜಿಲೆಂಡ್ ತಂಡ ಅಲ್ಪ ಮೊತ್ತಕ್ಕೆ ಆಲ್ ಔಟ್ ಆಗಿದೆ.

ಲಂಡನ್ ನ ದಿ ಕೆನಿಂಗ್ಟನ್ ಓವಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಅಭ್ಯಾಸ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಕೇವಲ 189 ರನ್ ಗಳಿಗೆ ಆಲ್ ಔಟ್ ಆಗಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಕಿವೀಸ್ ಪಡೆ ಜಡೇಜಾ ಮತ್ತು ಶಮಿ ಬೌಲಿಂಗ್ ದಾಳಿ ತತ್ತರಿಸಿ ಕೇವಲ 189 ರನ್ ಗಳಿಗೆ ಆಲ್ ಔಟ್ ಆಯಿತು. ವಿಲಿಯಮ್ಸನ್ ಪಡೆಗೆ ಪಂದ್ಯದ ಮೂರನೇ ಓವರ್ ನಲ್ಲೇ ಭಾರತದ ವೇಗಿ ಮಹಮದ್ ಶಮಿ ಆರಂಭಿಕ ಆಘಾತ ನೀಡಿದರು. ಕೇವಲ 9 ರನ್ ಗಳಿಸಿದ್ದ ಗಪ್ಚಿಲ್ ರನ್ನು ಔಟ್ ಮಾಡುವ ಮೂಲಕ ಭಾರತಕ್ಕೆ ಮೊದಲ ಮೇಲುಗೈ ತಂದಿತ್ತರು. ಬಳಿಕ ಕ್ರೀಸ್ ಗೆ ಬಂದ ನಾಯಕ ವಿಲಿಯಮ್ಸನ್ ಕೂಡ ಕೇವಲ 8 ರನ್ ಗಳಿಸಿ ಜಡೇಜಾ ಬೌಲಿಂಗ್ ನಲ್ಲಿ ಕ್ಲೀನ್ ಬೌಲ್ಡ್ ಆದರು. ಮಧ್ಯಮ ಕ್ರಮಾಂಕದ ಆಟಗಾರ ಬ್ರೂಮ್ ಶೂನ್ಯಕ್ಕೆ ಔಟ್ ಆಗುವುದರೊಂದಿಗೆ ನಿರಾಶೆ ಮೂಡಿಸಿದರು.

ಒಂದೆಡೆ ವಿಕೆಟ್ ಉರುಳುತ್ತಿದ್ದರೆ ನ್ಯೂಜಿಲೆಂಡ್ ಆರಂಭಿಕ ಆಟಗಾರ ರೊಂಚಿ ಮಾತ್ರ ರಕ್ಷಣಾತ್ಮಕ ಆಟಕ್ಕೆ ಮೊರೆ ಹೋಗಿ ಕಿವೀಸ್ ಬ್ಯಾಟಿಂಗ್ ಬೆನ್ನೆಲುಬಾಗಿ ನಿಂತರು. ಆದರೆ ರೊಂಚಿ ಅವರಿಗೆ ತಂಡದ ಇತರೆ ಆಟಗಾರರು ಸಾಥ್  ನೀಡಲಿಲ್ಲ. ಬ್ರೂಮ್ ಬಳಿಕ ಬಂದ ಆ್ಯಂಡರ್ಸನ್ (13 ರನ್), ಸ್ಯಾಂಥರ್ (12) ಮತ್ತು ಗ್ರಾಂಡ್ ಹೋಮ್ (4 ರನ್) ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡರು. ಇದೇ ಸಂದರ್ಭದಲ್ಲಿ ರೊಂಚಿ ಕೂಡ ಅರ್ಧಶತಕ ಸಿಡಿಸಿ ಸಂಭ್ರಮಿಸಿದರು.  ಆದರೆ 66 ರನ್ ಗಳಿಸಿದ್ದ ರೊಂಚಿ ಜಡೇಜೌ ಬೌಲಿಂಗ್ ನಲ್ಲಿ ಕ್ಲೀನ್ ಬೌಲ್ಡ್ ಆದರು. ಈ ಹಂತದಲ್ಲಿ ರೊಂಚಿ ಜೊತೆಗೂಡಿದ ನೀಶಮ್ ಕ್ರೀಸ್ ನಲ್ಲಿ ಗಟ್ಟಿಯಾಗಿ ನೆಲೆಯೂರುವ ಪ್ರಯತ್ನ ಮಾಡಿದರು. ಆದರೆ ತಂಡದ ಕೆಳಕ್ರಮಾಂಕದ ಆಟಗಾರರಿಂದ ನೀಶಮ್ ಗೆ ಸಾಥ್ ದೊರೆಯಲಿಲ್ಲ ಪರಿಣಾಮ ನ್ಯೂಜಿಲೆಂಡ್ ತಂಡ ಕೇವಲ 38.4 ಓವರ್ ಗಳಲ್ಲಿ 189 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು. 46 ರನ್ ಗಳಿಸಿದ್ದ ನೀಶಮ್ ಅಜೇಯರಾಗಿ ಉಳಿದರು.

ಇನ್ನು ಭಾರತದ ಪರ ಮಹಮದ್ ಶಮಿ ಹಾಗೂ ಭುವನೇಶ್ವರ್ ಕುಮಾರ್ ತಲಾ 3 ವಿಕೆಟ್ ಪಡೆದು ಮಿಂಚಿದರೆ, ಜಡೇಜಾ 2 ಹಾಗೂ ಅಶ್ವಿನ್ ಮತ್ತು ಯಾದವ್ ತಲಾ 1 ವಿಕೆಟ್ ಪಡೆದರು.

SCROLL FOR NEXT