ಪುಣೆ: ಮಹಾರಾಷ್ಟ್ರ ವಿರುದ್ಧ ರಣಜಿ ಕ್ರಿಕೆಟ್ ಪಂದ್ಯದಲ್ಲಿ ಕರ್ನಾಟಕದ ಮಯಾಂಕ್ ಅಗರ್ವಾಲ್ ಭರ್ಜರಿ ತ್ರಿಶತಕವನ್ನು ಗಳಿಸಿದ್ದು ರಾಜ್ಯ ತಂಡ ಬೃಹತ್ ಮೊತ್ತ ಗಳಿಸಿ ಡಿಕ್ಲೇರ್ ಮಾಡಿಕೊಂಡಿದೆ.
ಮಹಾರಾಷ್ಟ್ರ ವಿರುದ್ಧ ನಡೆಯುತ್ತಿರುವ ರಣಜಿಯ ಎರಡನೆ ದಿನದಾಟದ ಅಂತ್ಯಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದ ಮಯಾಂಕ್ ಅಗರ್‍ವಾಲ್ ಹಾಗೂ ಕರುಣ್‍ನಾಯರ್ ಇಂದು ಸಹ ಅದ್ಭುತ ಆಟ ಮುಂದುವರಿಸಿದರು.
ಮಹಾರಾಷ್ಟ್ರ ಮೊದಲ ಇನಿಂಗ್ಸ್ ನಲ್ಲಿ 245 ರನ್ ಗಳಿಸಿದ್ದು ಇದಕ್ಕೆ ಉತ್ತರವಾಗಿ ಕರ್ನಾಟಕ 5 ವಿಕೆಟ್ ನಷ್ಟಕ್ಕೆ 628 ರನ್ ಗಳಿಸಿ 383 ರನ್ ಗಳ ಮುನ್ನಡೆ ದಾಖಲಿಸಿದೆ.
ಮೂರನೇ ದಿನದಾಟದಲ್ಲಿ ರುಣ್‍ನಾಯರ್ (116 ರನ್,13 ಬೌಂಡರಿ), ಕೆ.ಗೌತಮ್ (11 ರನ್) ಗಳಿಸಿ ವಿಕೆಟ್ ಒಪ್ಪಿಸಿದ್ದರೆ ಮಯಾಂಕ್ ಅಜೇಯರಾಗಿ ಉಳಿದರು. ಇವರು 494 ಬಾಲ್ ಗಳಲ್ಲಿ ಅಜೇಯವಾಗಿ 304 ರನ್ ಗಳಿಸಿದರು. ಇದರಲ್ಲಿ 28 ಬೌಂಡರಿ ಮತ್ತು 4 ಸಿಕ್ಸರ್ ಸೇರಿದೆ. ಈ ಮೂಲಕ ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ತ್ರಿಶತಕ ಭಾರಿಸಿದ ಕರ್ನಾಟಕದ ಮೂರನೇ ಮತ್ತು ಭಾರತದ 43 ನೇ ಬ್ಯಾಟ್ಸ್ ಮನ್ ಎಂಬ ದಾಖಲೆಗೆ ಮಯಾಂಕ್ ಪಾತ್ರರಾದರು.
ಮಯಾಂಕ್ ತ್ರಿಶತಕ ಗಳಿಸುತ್ತಿದ್ದಂತೆಯೇ ನಾಯಕ ವಿನಯ್ ಕುಮಾರ್ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡರು.