ನಾಗ್ಪುರ: ನಾಗ್ಪುರದ ಜಮ್ತಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಶ್ರೀಲಂಕಾ ನಡುವಿನ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ವಿರಾಟ್ ಕೊಹ್ಲಿ ತಮ್ಮ 19ನೇ ಟೆಸ್ಟ್ ಶತಕ ಪೂರೈಸಿದ್ದಾರೆ.ಪಂದ್ಯದ ಮೂರನೇ ದಿನವಾದ ಇಂದು ಕೊಹ್ಲಿ 130 ಎಸೆತಗಳಲ್ಲಿ 10 ಬೌಂದರಿ ಸೇರಿದಂತೆ ನೂರು ರನ್ ಕಲೆಹಾಕಿದ್ದರು.
ಈ ವರ್ಷ ಟೆಸ್ಟ್ ಕ್ರಿಕೆಟ್ ನಲ್ಲಿ ಕೊಹ್ಲಿ ಗಳಿಸಿದ ನಾಲ್ಕನೇ ಶತಕ ಇದಾಗಿದ್ದು, 201ರ ಒಟ್ಟಾರೆ ಕ್ರಿಕೆಟ್ ನಲ್ಲಿ ಒಟ್ಟು 10 ಶತಕ ಬಾರಿಸಿರುವ ಕೊಹ್ಲಿ ಹೊಸ ದಾಖಲೆ ನಿರ್ಮಿಸಿದ್ದಾರೆ. ನಾಯಕ ಸ್ಥಾನದಲ್ಲಿದ್ದು ಒಂದೇ ವರ್ಷದಲ್ಲಿ ಅತಿ ಹೆಚ್ಚು ಶತಕ ಸಿಡಿಸಿದವರ ಪಟ್ಟಿಯಲ್ಲಿ ಕೊಹ್ಲಿ ಮೊದಲ ಸ್ಥಾನದಲ್ಲಿದ್ದರೆ ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ ಮತ್ತು ಗ್ರೇಮ್ ಸ್ಮಿತ್ 9 ಶತಕ ಗಳೊದನೆ ದ್ವಿತೀಯ ಸ್ಥಾನದಲ್ಲಿದ್ದಾರೆ. ಇಷ್ಟೇ ಅಲ್ಲದೆ ವಿರಾಟ್ ಇದೇ ಪಂದ್ಯದಲ್ಲಿ ಸುನಿಲ್ ಗವಾಸ್ಕರ್ ಅವರ 11 ಶತಕಗಳ ದಾಖಲೆಯನ್ನು ಸಹ ಮುರಿದಿದ್ದಾರೆ.
ಪಂದ್ಯದ ದ್ವಿತೀಯ ದಿನವಾದ ನಿನ್ನೆ ಶತಕ ಗಳಿಸಿದ್ದ ಚೇತೇಶ್ವರ್ ಪೂಜಾರ ಹಾಗೂ ಅರ್ಧ ಶತಕ ಪೂರೈಸಿದ್ದ ವಿರಾಟ್ ಕೊಹ್ಲಿ ಇಂದು ಆಟ ಮುಂದುವರಿಸಿ ಭೋಜನ ವಿರಾಮದ ವೇಳೆಗೆ ಪೂಜಾರ ಅವರು 143 ರನ್ ಗಳಿಸಿ ತಮ್ಮ ವಿಕೆಟ್ ಒಪ್ಪಿಸಿದ್ದರು. ಆ ಬಳಿಕ ಬಂದ ಅಜಿಂಕ್ಯ ರಹಾನೆ ಸಹ ಎರಡು ರನ್ ಗಳಿಸಿ ತೆರಳಿದರು. ಹೀಗೆ ಭಾರತವು ಒಟ್ಟಾರೆ ನಾಲ್ಕು ವಿಕೆಟ್ ನಷ್ಟಕ್ಕೆ 455 ರನ್ ಗಳಿಸಿದೆ. ಇದರೊಡನೆ ತಂಡವು 250 ರನ್ ಮುನ್ನಡೆ೩ ಸಾಧಿಸಿದ್ದು ಕೊಹ್ಲಿ 152 , ರೋಹಿತ್ ಶರ್ಮಾ 20 ರನ್ ಗಳಿಸಿ ಆಡುತ್ತಿದ್ದಾರೆ.