ಲಂಕಾ ವಿರುದ್ಧದ ಮುಂದಿನ ಪಂದ್ಯಗಳಿಂದ ವಿರಾಟ್ ಕೊಹ್ಲಿಗೆ ವಿಶ್ರಾಂತಿ?
ಶ್ರೀಲಂಕಾ ವಿರುದ್ಧದ ಮುಂದಿನ ಪಂದ್ಯಗಳಿಂದ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ...
ನಾಗ್ಪುರ: ಶ್ರೀಲಂಕಾ ವಿರುದ್ಧದ ಮುಂದಿನ ಪಂದ್ಯಗಳಿಂದ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ಜನವರಿ 5ರಿಂದ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಕ್ರಿಕೆಟ್ ಸರಣಿಗಳು ಆರಂಭಗೊಳ್ಳುವ ಹಿನ್ನೆಲೆಯಲ್ಲಿ ಲಂಕಾ ವಿರುದ್ಧದ ಪಂದ್ಯಗಳಿಂದ ಕೊಹ್ಲಿಗೆ ವಿಶ್ರಾಂತಿ ನೀಡುವ ಸಾಧ್ಯತೆ ಇದ್ದು ನಾಳೆ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿ ಹಾಗೂ ಶ್ರೀಲಂಕಾ ವಿರುದ್ಧದ ಕೊನೆಯ ಟೆಸ್ಟ್ ಮತ್ತು ಏಕದಿನ ಮತ್ತು ಟಿ20 ಸರಣಿಗೆ ಭಾರತ ತಂಡವನ್ನು ಬಿಸಿಸಿಐ ಘೋಷಿಸಲಿದೆ.
ವಿರಾಟ್ ಕೊಹ್ಲಿ ಕಳೆದ ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) ಆವೃತ್ತಿಯಿಂದಲೂ ಸತತ ಸರಣಿ ಗಳನ್ನು ಆಡುತ್ತಿರುವ ಕಾರಣಕ್ಕಾಗಿ ಬಿಸಿಸಿಐ ಈ ತೀರ್ಮಾನಕ್ಕೆ ಬಂದಿದೆ. ಒಂದು ವೇಳೆ ಕೊಹ್ಲಿಗೆ ವಿಶ್ರಾಂತಿ ಸಿಕ್ಕರೆ ಲಂಕಾ ವಿರುದ್ಧ ನಡೆಯಲಿರುವ ಕೊನೆ ಟೆಸ್ಟ್ ಪಂದ್ಯ ಹಾಗೂ ಮೂರು ಏಕದಿನ ಹಾಗೂ ಮೂರು ಟಿ20 ಪಂದ್ಯಗಳಿಂದ ಹೊರಗುಳಿಯಲಿದ್ದಾರೆ.
ಬಿಸಿಸಿಐನ ಬ್ಯೂಸಿ ಶೆಡ್ಯೂಲ್ ವಿರುದ್ಧ ಈ ಹಿಂದೆ ನಾಯಕ ವಿರಾಟ್ ಕೊಹ್ಲಿ ವಾಗ್ದಾಳಿ ನಡೆಸಿದ್ದರು. ಇದನ್ನು ಪರಿಗಣಿಸಿ ಕೊಹ್ಲಿಗೆ ವಿಶ್ರಾಂತಿ ನೀಡುವ ಸಾಧ್ಯತೆ ಇದೆ.
ನಾಳೆ ದಕ್ಷಿಣ ಆಫ್ರಿಕಾ ವಿರುದ್ಧದ ಕ್ರಿಕೆಟ್ ಸರಣಿಗೆ ಟೀಂ ಇಂಡಿಯಾ ತಂಡವನ್ನು ಬಿಸಿಸಿಐ ಪ್ರಕಟಿಸಲಿದ್ದು ಯಾರ್ಕರ್ ಸ್ಪೆಷಲಿಸ್ಟ್ ಜಸ್ ಪ್ರೀತ್ ಬೂಮ್ರಾ ಮತ್ತು ಚೈನಾಮನ್ ಕುಲದೀಪ್ ಯಾದವ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಪೈಪೋಟಿ ನಡೆದಿದೆ. ವಿರಾಟ್ ಕೊಹ್ಲಿ ವಿಶ್ರಾಂತಿ ಪಡೆದರೇ ಕೊನೆ ಟೆಸ್ಟ್ ಪಂದ್ಯದ ನಾಯಕತ್ವವನ್ನು ಅಜಿಂಕ್ಯ ರಹಾನೆ, ಏಕದಿನ, ಟಿ20 ಪಂದ್ಯದ ನಾಯಕತ್ವವನ್ನು ರೋಹಿತ್ ಶರ್ಮಾ ಹೆಗಲಿಗೆ ಬೀಳಲಿದೆ.