ಕ್ರಿಕೆಟ್

ಪಾಕ್ ಸ್ಪಿನ್ನರ್ ಅಜ್ಮಲ್ ಕ್ರಿಕೆಟ್‌ ಗೆ ವಿದಾಯ, ಐಸಿಸಿ ವಿರುದ್ಧ ಆಕ್ರೋಶ

Lingaraj Badiger
ಕರಾಚಿ: ಪಾಕಿಸ್ತಾನದ ವಿವಾದಾತ್ಮಕ ಆಫ್ ಸ್ಪಿನ್ನರ್ ಸಯೀದ್ ಅಜ್ಮಲ್ ಅವರು ಗುರುವಾರ ಭಾರವಾದ ಮನಸಿನಿಂದ ತಮ್ಮ ಕ್ರಿಕೆಟ್ ಬದುಕಿಗೆ ಅಧಿಕೃತವಾಗಿ ವಿದಾಯ ಹೇಳಿದ್ದಾರೆ.
ನನ್ನ 40ನೇ ವರ್ಷದಲ್ಲಿ ನಾನು ಇಂದು ನನ್ನ ಕ್ರಿಕೆಟ್ ವೃತ್ತಿ ಜೀವನಕ್ಕೆ ವಿದಾಯ ಹೇಳುತ್ತಿದ್ದೇನೆ. ಈ ಮೂಲಕ ಯುವ ಆಟಗಾರರಿಗೆ ಅವಕಾಶ ಮಾಡಿಕೊಡಲು ಇದು ಸರಿಯಾದ ಸಮಯ ಎಂದು ಭಾವಿಸಿದ್ದೇನೆ. ಈಗ ನಾನು ದೇಶೀಯ ತಂಡಗಳಲ್ಲಿಯೂ ಭಾರವಾಗಬಹುದು. ಹೀಗಾಗಿ ನಾನು ನನ್ನ ಗೌರವವನ್ನು ಕಳೆದುಕೊಳ್ಳಲು ಬಯಸುವುದಿಲ್ಲ ಎಂದು ಅಜ್ಮಲ್ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ನಾನು ಭಾರವಾದ ಮನಸಿನಿಂದ ನಿವೃತ್ತಿಯಾಗುತ್ತಿದ್ದೇನೆ. ಏಕೆಂದರೆ ಬೌಲಿಂಗ್ ಕ್ರಮಗಳನ್ನು ನಿರ್ಣಯಿಸಲು ಐಸಿಸಿ ಅನುಸರಿಸುತ್ತಿರುವ ಪ್ರೋಟೋಕಾಲ್ ಸರಿಯಿಲ್ಲ. ಐಸಿಸಿಯ ಪ್ರೋಟೋಕಾಲ್ ತುಂಬಾ ಕಠಿಣವಾಗಿದೆ ಮತ್ತು ಎಲ್ಲಾ ಬೌಲರ್ಗಳು ಅಂತರಾಷ್ಟ್ರೀಯ ಕ್ರಿಕೆಟ್ ಆಡುವ ವೇಳೆ ಪರೀಕ್ಷಿಸಲ್ಪಟ್ಟೆರೆ ಶೇ. 90ರಷ್ಟು ವಿಫಲವಾಗುತ್ತಾರೆ ಎಂದು ಅಜ್ಮಲ್ ಟೀಕಿಸಿದ್ದಾರೆ.
ಪಾಕಿಸ್ಥಾನ ಕಂಡ ಶ್ರೇಷ್ಠ ಸ್ಪಿನ್ನರ್‌ಗಳಲ್ಲಿ ಒಬ್ಬರಾಗಿರುವ ಸಯೀದ್‌ ಅಜ್ಮಲ್‌, ಬೌಲಿಂಗ್‌ ಆ್ಯಕ್ಷನ್‌ ವಿವಾದದಲ್ಲಿ ಸಿಲುಕಿದ ಬಳಿಕ ನೈಜ ಚಾರ್ಮ್ ಕಳೆದುಕೊಂಡಿದ್ದರು. 2014ರಲ್ಲಿ ಅವರು ಮೊದಲ ಬಾರಿಗೆ ಆ್ಯಕ್ಷನ್‌ ಸುಳಿಗೆ ಸಿಲುಕಿದರು. ಬಳಿಕ ಪಾಕಿಸ್ಥಾನದ ಖ್ಯಾತ ಸ್ಪಿನ್ನರ್‌ ಸಕ್ಲೇನ್‌ ಮುಷ್ತಾಕ್‌ ಮಾರ್ಗದರ್ಶನದಲ್ಲಿ ಬೌಲಿಂಗ್‌ ಶೈಲಿಯನ್ನು ಸರಿಪಡಿಸಿಕೊಂಡರೂ ಮೊದಲಿನಂತೆ ವಿಕೆಟ್‌ ಕೀಳಲು ಅವರಿಂದ ಸಾಧ್ಯವಾಗಲಿಲ್ಲ. 
ಟೆಸ್ಟ್ ನಲ್ಲಿ 35 ಪಂದ್ಯಗಳನ್ನು ಆಡಿರುವ ಅವರು 178 ವಿಕೆಟ್ ಗಳನ್ನು ಕಬಳಿಸಿದ್ದಾರೆ. ಇನ್ನು 113 ಏಕದಿನ ಪಂದ್ಯಗಳಲ್ಲಿ 184 ವಿಕೆಟ್ ಗಳನ್ನು ಪಡೆದಿದ್ದಾರೆ. 24 ರನ್ ಗಳಿಗೆ 5 ವಿಕೆಟ್ ಪಡೆದಿರುವುದು ಅವರ ವೈಯಕ್ತಿಕ ಸಾಧನೆಯಾಗಿದೆ. 64 ಟಿ20 ಪಂದ್ಯಗಳಲ್ಲಿ 85 ವಿಕೆಟ್ ಪಡೆದಿದ್ದಾರೆ. 
SCROLL FOR NEXT