ಆಶೀಶ್ ನೆಹ್ರಾ (ಸಂಗ್ರಹ ಚಿತ್ರ)
ನವದೆಹಲಿ: ಭಾರತ ತಂಡದ ಹಿರಿಯ ವೇಗಿ ಆಶೀಶ್ ನೆಹ್ರಾ ಅಂತಾರಾಷ್ಟ್ರೀಯ ಕ್ರಿಕೆಟಿನಿಂದ ಗುರುವಾರ ನಿವೃತ್ತಿ ಘೋಷಿಸಿದ್ದಾರೆ.
ತಮ್ಮ ನಿವೃತ್ತಿ ನಿರ್ಧಾರವನ್ನು ನೆಹ್ರಾ ತಂಡದ ಮುಖ್ಯ ಕೋಚ್ ರವಿ ಶಾಸ್ತ್ರಿ ಮತ್ತು ನಾಯರ ವಿರಾಟ್ ಕೊಹ್ಲಿ ಅವರಿಗೆ ತಿಳಿಸಿರುವುದಾಗಿ ಬಿಸಿಸಿಐ ಅಧಿಕಾರಿ ಹೇಳಿದ್ದಾರೆ. ಮುಂದಿನ ವರ್ಷ ಐಸಿಸಿ ಯಾವುದೇ ಟಿ20 ವೇಳಾಪಟ್ಟಿ ಬಿಡುಗಡೆ ಮಾಡದೆ ಇರುವ ಕಾರಣದಿಂದ ಯುವಕರಿಗೆ ಅವಕಾಶ ನೀಡುವ ದೃಷ್ಟಿಯಿಂದ ನಿವೃತ್ತಿ ಘೋಷಿಸುತ್ತೇನೆ ಎಂದು ಹೇಳಿದ್ದಾರೆ ಎಂದು ತಿಳಿದುಬಂದಿದೆ.
1999ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದ ನೆಹ್ರಾ ಒಟ್ಟು 17 ಟೆಸ್ಟ್, 120 ಏಕದಿನ ಪಂದ್ಯ ಹಾಗೂ 26 ಟಿ20 ಪಂದ್ಯಗಳನ್ನು ಆಡಿದ್ದಾರೆ. ಈ ಪೈಕಿ ನೆಹ್ರಾ 44 ಟೆಸ್ಟ್ ವಿಕೆಟ್, 157 ಏಕದಿನ ಮತ್ತು 34 ಟಿ20 ವಿಕೆಟ್ ಕಬಳಿಸಿದ್ದಾರೆ. ನೆಹ್ರಾ 1999ರಲ್ಲಿ ಮೊಹಮ್ಮದ್ ಅಜರುದ್ಧೀನ್ ನಾಯಕತ್ವದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟಿಗೆ ಪಾದಾರ್ಪಣೆಗೈದಿದ್ದರು. ಬಳಿಕ ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ, ಮಹೇಂದ್ರ ಸಿಂಗ್ ಧೋನಿ ಹಾಗೂ ವಿರಾಟ್ ಕೊಹ್ಲಿ ನೇತೃತ್ವದಲ್ಲಿ ನೆಹ್ರಾ ಪಂದ್ಯಗಳನ್ನಾಡಿದ್ದಾರೆ.
ಭಾರತದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರನ್ನು ಹೊರತು ಪಡಿಸಿದರೆ. ಅತೀ ಹೆಚ್ಚು ನಾಯಕರೊಂದಿಗೆ ಆಡಿದ ಕೀರ್ತಿ ನೆಹ್ರಾಗೆ ಸಲ್ಲುತ್ತದೆ. ಗಾಯದ ಸಮಸ್ಯೆಯಿಂದಾಗಿ ಆಗಾಗ ತಂಡದಿಂದ ಹೊರಗುಳಿಯುತ್ತಿದ್ದ ನೆಹ್ರಾ ತಮ್ಮ ಹುಟ್ಟೂರಿನ ಮೈದಾನದಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟಿಗೆ ವಿದಾಯ ಹೇಳುತ್ತೇನೆ ಎಂದು ಘೋಷಿಸಿದ್ದಾರೆ.
2003ರಲ್ಲಿ ಡರ್ಬನ್ ನಲ್ಲಿ ಇಂಗ್ಲೆಂಡ್ ವಿರುದ್ಧ ವಿಶ್ವಕಪ್ ಪಂದ್ಯದಲ್ಲಿ ನೆಹ್ರಾ 23 ರನ್ ಗಳಿಗೆ ಆರು ವಿಕೆಟ್ ಪಡೆದುಕೊಂಡಿದ್ದು ಅವರ ವೃತ್ತಿ ಜೀವನ ಶ್ರೇಷ್ಠ ಸಾಧನೆಯಾಗಿದೆ. ಈ ಪಂದ್ಯದಲ್ಲಿ ಅನಾರೋಗ್ಯದ ಹೊರತಾಗಿಯೂ ನೆಹ್ರಾ ಆಡಿದ್ದರು. 2011ರಲ್ಲಿ ವಿಶ್ವಕಪ್ ಗೆದ್ದ ತಂಡದಲ್ಲೂ ನೆಹ್ರಾ ಆಡಿದ್ದರು. ಆದರೆ ಕೈಬೆರಳಿನ ಗಾಯದಿಂದಾಗಿ ಫೈನಲ್ ಪಂದ್ಯ ಆಡಲು ಸಾಧ್ಯವಾಗಿರಲಿಲ್ಲ.
ಇನ್ನು ಪ್ರಸ್ತುತ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಮತ್ತು ಟೆಸ್ಟ್ ಕ್ರಿಕೆಟ್ ನಲ್ಲಿ ತಂಡಕ್ಕೆ ಆಯ್ಕೆಯಾಗುವಲ್ಲಿ ವಿಫಲರಾಗಿದ್ದ ನೆಹ್ರಾ, ಟಿ20 ಸರಣಿಗೆ ಆಯ್ಕೆಯಾಗಿದ್ದರು. ಇದೀಗ ನವಂಬರ್ 1ರಂದು ದೆಹಲಿಯ ಫಿರೋಜ್ ಷಾ ಕೋಟ್ಲಾದಲ್ಲಿ ನ್ಯೂಜಿಲೆಂಡ್ ವಿರುದ್ಧ ಕೊನೆಯ ಟಿ20 ಪಂದ್ಯವನ್ನು ಆಡಲಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಸರಣಿಯಲ್ಲಿ ಟೀಂ ಇಂಡಿಯಾಗೆ ಆಯ್ಕೆಯಾಗಿರುವ ನೆಹ್ರಾ, ಮೊದಲ ಎರಡು ಪಂದ್ಯಗಳಲ್ಲಿ ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಂಡಿಲ್ಲ. ಇಂದು ನಡೆಯಲಿರುವ 3ನೇ ಹಾಗೂ ಅಂತಿಮ ಪಂದ್ಯದಲ್ಲಿ ನೆಹ್ರಾ ಕಣಕ್ಕಿಳಿಯುವ ಸಾಧ್ಯತೆ ಇದೆ.