ಕ್ರಿಕೆಟ್

ನಾನು ಬೇರೆ ದೇಶದ ಪರವಾಗಿ ಆಡಬಲ್ಲೆ: ಬಿಸಿಸಿಐಗೆ ಶ್ರೀಶಾಂತ್ ಬೆದರಿಕೆ

Lingaraj Badiger
ನವದೆಹಲಿ: ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಯಿಂದ ಆಜೀವ ನಿಷೇಧಕ್ಕೆ ಒಳಗಾಗಿರುವ ಕೇರಳ ವೇಗಿ ಎಸ್. ಶ್ರೀಶಾಂತ್ ಅವರು, ತಾನು ಮತ್ತೊಂದು ದೇಶದ ಪರವಾಗಿ ಆಡಬಹುದು ಎಂದು ಹೇಳುವ ಮೂಲಕ ಬಿಸಿಸಿಐಗೆ ಪರೋಕ್ಷವಾಗಿ ಬೆದರಿಕೆ ಹಾಕಿದ್ದಾರೆ.
ಎರಡು ದಿನಗಳ ಹಿಂದಷ್ಟೇ ಕೇರಳ ಹೈಕೋರ್ಟ್ ವಿಭಾಗೀಯ ಪೀಠ, ಶ್ರೀಶಾಂತ್ ಮೇಲಿನ ಆಜೀವ ನಿಷೇಧ ತೆರವಿಗೆ ತಡೆ ನೀಡಿದ್ದರಿಂದ ಆಕ್ರೋಶಗೊಂಡಿರುವ ವೇಗಿ, ಬಿಸಿಸಿಐ ಮಾತ್ರ ನನಗೆ ನಿಷೇಧ ಹೇರಿದೆ. ಐಸಿಸಿ ಯಾವುದೇ ನಿಷೇಧ ಹೇರಿಲ್ಲ. ಹೀಗಾಗಿ ನಾನು ಬೇರೆ ಯಾವುದೇ ದೇಶದ ಪರ ಆಡುವ ಸ್ವಾತಂತ್ರ್ಯ ಹೊಂದಿರುವುದಾಗಿ ಖಾಸಗಿ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಶ್ರೀಶಾಂತ್ ಹೇಳಿಕೊಂಡಿದ್ದಾರೆ. 
ಐಸಿಸಿ ಅಲ್ಲ, ಬಿಸಿಸಿಐ ನನ್ನ ಮೇಲೆ ನಿಷೇಧ ಹೇರಿದೆ. ಹಾಗಾಗಿ ಯಾವುದೇ ದೇಶದ ಪರ ನಾನು ಆಡಬಲ್ಲೆ. 34ರ ಹರೆಯದ ನಾನು ಗರಿಷ್ಠ ಆರು ವರ್ಷ ಆಡುವ ಸಾಮರ್ಥ್ಯ ಹೊಂದಿದ್ದೇನೆ. ಓರ್ವ ಕ್ರಿಕೆಟಿಗನಾಗಿ ಕ್ರಿಕೆಟ್ ಆಡಲು ತುಂಬಾ ಇಷ್ಟಪಡುತ್ತೇನೆ. ಎಲ್ಲದರ ಬಳಿಕ ಬಿಸಿಸಿಐ ಒಂದು ಖಾಸಗಿ ಸಂಸ್ಥೆ ಮಾತ್ರ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಬಿಸಿಸಿಐ ಆಜೀವ ನಿಷೇಧವನ್ನು ಹೈಕೋರ್ಟ್ ಎತ್ತಿ ಹಿಡಿದಾಗಲೇ ಶ್ರೀಶಾಂತ್ ಕ್ರಿಕೆಟ್ ಸಂಸ್ಥೆ ವಿರುದ್ಧ ಕಿಡಿ ಕಾರಿದ್ದರು. ಅಲ್ಲದೆ ಚೆನ್ನೈ ಸೂಪರ್ ಕಿಂಗ್ಸ್, ರಾಜಸ್ತಾನ ರಾಯಲ್ಸ್ ವಿರುದ್ಧವೇಕೆ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದ್ದರು.
SCROLL FOR NEXT