ನವದೆಹಲಿ: ಪುಣೆ ಕ್ರಿಕೆಟ್ ಮೈದಾನ ಪಿಚ್ ಕ್ಯುರೇಟರ್ ಪಾಂಡುರಂಗ ಸಲಗಾಂವ್ಕರ್ ಅವರು ಹಣ ಪಡೆದು ಬುಕ್ಕಿಗಳಿಗೆ ಪಿಚ್ ರಿಪೋರ್ಟ್ ನೀಡಿದ್ದಾರೆ ಎಂಬ ಗಂಭೀರ ಆರೋಪ ಹಿನ್ನೆಲೆ ಸಲಗಾಂವ್ಕರ್ ಅವರನ್ನು ಅಮಾನತು ಮಾಡಲಾಗಿದೆ.
ಬಿಸಿಸಿಐ ಹಂಗಾಮಿ ಕಾರ್ಯದರ್ಶಿ ಅಮಿತಾಬ್ ಚೌಧರಿ ಅವರು ಪಾಂಡುರಂಗ ಸಲಗಾಂವ್ಕರ್ ಅವರನ್ನು ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಪಿಚ್ ಕ್ಯುರೇಟರ್ ಹುದ್ದೆಯಿಂದ ಅಮಾನತು ಮಾಡಿದ್ದಾರೆ. ಇನ್ನು ಪುಣೆಯಲ್ಲಿ ನ್ಯೂಜಿಲೆಂಡ್ ಮತ್ತು ಟೀಂ ಇಂಡಿಯಾ ನಡುವಿನ 2ನೇ ಏಕದಿನ ಪಂದ್ಯ ನಡೆಯಲಿದೆ ಎಂದು ಅಮಿತಾಬ್ ಚೌಧರಿ ಅವರು ಹೇಳಿದ್ದಾರೆ.
ಪುಣೆ ಕ್ರಿಕೆಟ್ ಮೈದಾನ ಪಿಚ್ ಕ್ಯುರೇಟರ್ ಪಾಂಡುರಂಗ ಸಲಗಾಂವ್ಕರ್ ಅವರು ಹಣ ಪಡೆದು ಬಕ್ಕಿಗಳಿಗೆ ಪಿಚ್ ರಿಪೋರ್ಟ್ ನೀಡಲು ಮುಂದಾಗಿದ್ದರು ಎಂಬ ಗಂಭೀರ ಆರೋಪ ಮಾಡಲಾಗಿದೆ. ಈ ಬಗ್ಗೆ ಖಾಸಗಿ ಮಾಧ್ಯಮವೊಂದು ಕುಟುಕು ಕಾರ್ಯಾಚರಣೆ ನಡೆಸಿದ್ದು, ಪುಣೆ ಮೈದಾನದ ಪಿಚ್ ಕ್ಯುರೇಟರ್ ಪಾಂಡುರಂಗ ಸಲಗಾಂವ್ಕರ್ ಅವರು ಪಿಚ್ ಕುರಿತು ಮಾತನಾಡಿರುವ ದೃಶ್ಯಾವಳಿಗಳು ದಾಖಲಾಗಿವೆ.
ನಿಯಮಗಳ ಅನ್ವಯ ಪಂದ್ಯ ಆರಂಭಕ್ಕೂ ಮುನ್ನ ಯಾವುದೇ ಕಾರಣಕ್ಕೂ ಪಿಚ್ ನ ಕುರಿತು ಮಾಹಿತಿ ನೀಡುವಂತಿಲ್ಲ. ಕನಿಷ್ಠ ಪಕ್ಷ ಪಂದ್ಯವನ್ನು ಆಡುವ ಕ್ರಿಕೆಟಿಗರಿಗೂ ಕೂಡ ಪಿಚ್ ನ ಮಾಹಿತಿ ನೀಡುವಂತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಪಿಚ್ ಕ್ಯುರೇಟರ್ ಪಾಂಡುರಂಗ ಸಲಗಾಂವ್ಕರ್ ಅವರ ಈ ನಡೆ ಆತಂಕ ಮೂಡಿಸಿತ್ತು. ಇನ್ನು ಪಿಚ್ ಬಗ್ಗೆ ಮಾಹಿತಿ ನೀಡಿದ್ದು ಮಾತ್ರವಲ್ಲದೇ ವರದಿಗಾರರು ಪಿಚ್ ನೋಡಲು ಅವಕಾಶ ಕೂಡ ಮಾಡಿಕೊಟ್ಟಿದ್ದಾರೆ ಎನ್ನಲಾಗಿತ್ತು.