ಪುಣೆ ಪಿಚ್ ಕ್ಯುರೇಟರ್ ಸಲಗಾಂವ್ಕರ್
ಪುಣೆ: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಏಕದಿನ ಪಂದ್ಯ ಆರಂಭಕ್ಕೂ ಮುನ್ನವೇ ಫಿಕ್ಸ್ ಆಗಿದೆಯೇ..ಇಂತಹುದೊಂದು ಪ್ರಶ್ನೆಗೆ ಖಾಸಗಿ ಮಾಧ್ಯಮ ಕುಟುಕು ಕಾರ್ಯಾಚರಣೆ ಕಾರಣವಾಗಿದೆ.
ಪುಣೆ ಕ್ರಿಕೆಟ್ ಮೈದಾನ ಪಿಚ್ ಕ್ಯುರೇಟರ್ ಪಾಂಡುರಂಗ ಸಲಗಾಂವ್ಕರ್ ಅವರು ಹಣ ಪಡೆದು ಬಕ್ಕಿಗಳಿಗೆ ಪಿಚ್ ರಿಪೋರ್ಟ್ ನೀಡಲು ಮುಂದಾಗಿದ್ದರು ಎಂಬ ಗಂಭೀರ ಆರೋಪ ಮಾಡಲಾಗಿದೆ. ಈ ಬಗ್ಗೆ ಖಾಸಗಿ ಮಾಧ್ಯಮವೊಂದು ಕುಟುಕು ಕಾರ್ಯಾಚರಣೆ ನಡೆಸಿದ್ದು, ಪುಣೆ ಮೈದಾನದ ಪಿಚ್ ಕ್ಯುರೇಟರ್ ಪಾಂಡುರಂಗ ಸಲಗಾಂವ್ಕರ್ ಅವರು ಪಿಚ್ ಕುರಿತು ಮಾತನಾಡಿರುವ ದೃಶ್ಯಾವಳಿಗಳು ದಾಖಲಾಗಿವೆ.
ತಮ್ಮನ್ನು ತಾವು ಬುಕ್ಕಿಗಳು ಎಂದು ಹೇಳಿಕೊಂಡ ವಾಹಿನಿ ವರದಿಗಾರರು ಪಿಚ್ ಕ್ಯುರೇಟರ್ ಪಾಂಡುರಂಗ ಸಲಗಾಂವ್ಕರ್ ಅವರನ್ನು ಮಾತನಾಡಿಸಿದ್ದು, ಪಂದ್ಯಕ್ಕೂ ಮೊದಲೇ ಪಿಚ್ ನ ಗುಣಾವಗುಣಗಳ ಕುರಿತು ಮಾಹಿತಿ ಕೇಳಿದ್ದಾರೆ. ಆದರೆ ನಿಯಮಗಳ ಅನ್ವಯ ಪಂದ್ಯ ಆರಂಭಕ್ಕೂ ಮುನ್ನ ಯಾವುದೇ ಕಾರಣಕ್ಕೂ ಪಿಚ್ ನ ಕುರಿತು ಮಾಹಿತಿ ನೀಡುವಂತಿಲ್ಲ. ಕನಿಷ್ಠ ಪಕ್ಷ ಪಂದ್ಯವನ್ನು ಆಡುವ ಕ್ರಿಕೆಟಿಗರಿಗೂ ಕೂಡ ಪಿಚ್ ನ ಮಾಹಿತಿ ನೀಡುವಂತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಪಿಚ್ ಕ್ಯುರೇಟರ್ ಪಾಂಡುರಂಗ ಸಲಗಾಂವ್ಕರ್ ಅವರ ಈ ನಡೆ ಆತಂಕ ಮೂಡಿಸಿದೆ.
ವರದಿಗಾರರು ಯಾರು ಎಂದು ತಿಳಿಯದೇ ಪಿಚ್ ನ ಸಂಪೂರ್ಣ ಮಾಹಿತಿ ನೀಡಿರುವ ಪಾಂಡುರಂಗ ಅವರು, ಬುಕ್ಕಿಗಳಿಗೇ ನೆರವಾಗುವಂತೆಯೇ ಪಿಚ್ ನಿರ್ಮಾಣ ಮಾಡಲು ಸಿದ್ಧ ಎಂದು ಹೇಳಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ. ಪಿಚ್ ಬ್ಯಾಟ್ಸಮನ್ ಗಳಿಗೆ ನೆರವಾಗುತ್ತದೆ. ಮೊದಲು ಬ್ಯಾಟಿಂಗ್ ಮಾಡುವ ತಂಡ 330 ರಿಂದ 340 ರನ್ ಗಳನ್ನು ಪೇರಿಸಬಹುದು ಎಂದು ಹೇಳಿದ್ದಾರೆ. ಇಬ್ಹರು ವೇಗಿಗಳನ್ನು ಇಟ್ಟುಕೊಂಡು ಆಡಿದರೆ ಉತ್ತಮ ಎಂಬ ಸಲಹೆಯನ್ನೂ ಪಾಂಡುರಂಗ ಅವರು ನೀಡಿದ್ದಾರೆ.
ಪಿಚ್ ಬಗ್ಗೆ ಮಾಹಿತಿ ನೀಡಿದ್ದು ಮಾತ್ರವಲ್ಲದೇ ವರದಿಗಾರರು ಪಿಚ್ ನೋಡಲು ಅವಕಾಶ ಕೂಡ ಮಾಡಿಕೊಟ್ಟಿದ್ದಾರೆ ಎನ್ನಲಾಗಿದೆ.
ಈ ವಿಚಾರ ಇದೀಗ ವ್ಯಾಪಕ ವೈರಲ್ ಆಗುತ್ತಿದ್ದು, ರಾಷ್ಟ್ರೀಯ ಮಾಧ್ಯಮಗಳಲ್ಲಿ ವ್ಯಾಪಕ ಸುದ್ದಿಗೆ ಗ್ರಾಸವಾಗಿದೆ. ಅಂತೆಯೇ ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.