ಕ್ರಿಕೆಟ್

ಐಸಿಸಿ ನೂತನ ನಿಯಮಾವಳಿ ಸೆ.28ರಿಂದ ಜಾರಿಗೆ

Vishwanath S
ದುಬೈ: ಮೈದಾನದಲ್ಲಿ ಆಟಗಾರರ ಅಸಭ್ಯ ವರ್ತನೆಗೆ ಕಡಿವಾಣ ಹಾಕುವ ಸಲುವಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ನೂತನ ನಿಯಮಾವಗಳಿಗಳು ಸೆಪ್ಟೆಂಬರ್ 28ರಿಂದ ಜಾರಿಗೆ ಬರಲಿದೆ. 
ಆಟಗಾರರ ಅಸಭ್ಯ ವರ್ತನೆ, ಹಗುರ ಬ್ಯಾಟ್ ಹಾಗೂ ಡಿಆರ್ಎಸ್ ಸಂಬಂಧ ಹೊಸ ನಿಯಮಾವಳಿಗಳನ್ನು ಐಸಿಸಿ ರೂಪಿಸಿದೆ. ಈ ನಿಯಮಾವಳಿ ಸೆ.28ರಿಂದ ಜಾರಿಗೆ ಬರಲಿದ್ದು ಅಂದಿನಿಂದ ಶುರುವಾಗುವ ಸರಣಿ ಅಥವಾ ನಂತರ ಶುರುವಾಗುವ ಸರಣಿಗಳಿಗೆ ಅನ್ವಯಿಸುತ್ತದೆ. ಇನ್ನು ಸದ್ಯ ಆಸ್ಟ್ರೇಲಿಯಾ ಹಾಗೂ ಟೀಂ ಇಂಡಿಯಾ ನಡುವಿನ ಏಕದಿನ ಸರಣಿಯಲ್ಲಿ ಮೂರು ಪಂದ್ಯಗಳು ಮುಗಿದಿರುವುದರಿಂದ ಹಳೆಯ ನಿಯಮಾವಳಿಗಳೇ ಅನ್ವಯವಾಗಲಿದೆ. 
ಮೆರಿಲ್​ಬೋನ್ ಕ್ರಿಕೆಟ್ ಕ್ಲಬ್​ನ(ಎಂಸಿಸಿ) ವಿಶ್ವ ಕ್ರಿಕೆಟ್ ಸಮಿತಿ ಶಿಫಾರಸನ್ನು ಐಸಿಸಿ ಜಾರಿಗೆ ತಂದಿದೆ. ಎಂಸಿಸಿ ಹೊಸದಾಗಿ ಅಂಗೀಕರಿಸಿರುವ ನಿಯಮದಂತೆ ಕ್ರಿಕೆಟಿಗರು ಬಳಸುವ ಬ್ಯಾಟ್ 108 ಎಂಎಂ ಅಗಲವಿರಬೇಕು, ಬ್ಯಾಟ್ ಮಧ್ಯಭಾಗ 67ಎಂಎಂ ದಪ್ಪವಿರಬೇಕು ಮತ್ತು ಬ್ಯಾಟ್ ಮೇಲ್ಬಾಗದ ದಪ್ಪ 40 ಎಂಎಂ ಮೀರಬಾರದು. ಆದರೆ ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ, ಕ್ರಿಸ್ ಗೇಯ್ಲ್, ಡೇವಿಡ್ ವಾರ್ನರ್ ಬಳಸುತ್ತಿರುವ ಬ್ಯಾಟ್ ಮೇಲ್ಬಾಗ 44 ಎಂಎಂ ಅಳತೆ ಹೊಂದಿದೆ. ಹೀಗಾಗಿ ಈ ಮೂವರು ಆಟಗಾರರು ತಮ್ಮ ಬ್ಯಾಟ್ ಗಳನ್ನು ಬದಲಾಯಿಸುವ ಅನಿವಾರ್ಯತೆಗೆ ಸಿಲುಕಿದ್ದಾರೆ.
ಇನ್ನು ಮೈದಾನದಲ್ಲಿ ಸ್ಲೆಡ್ಜಿಂಗ್, ಜಗಳ, ಜನಾಂಗಿಯ ನಿಂದನೆಯಂತಹ ದುರ್ವರ್ತನೆಗಳನ್ನು ತಡೆಯುವ ನಿಟ್ಟಿನಲ್ಲೂ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದ್ದು, ದುರ್ವರ್ತನೆ ತೋರುವ ಆಟಗಾರನ ವಿರುದ್ಧ ದಂಡದ ರೂಪವಾಗಿ ಎದುರಾಳಿ ತಂಡಕ್ಕೆ ಹೆಚ್ಚುವರಿ ರನ್ ನೀಡುವ ನಿರ್ಧಾರ ಕೈಗೊಳ್ಳಲಾಗಿದೆ. ಅಂತೆಯೇ ರನ್ ಔಟ್, ಅಂಪೈರ್ ತೀರ್ಪನ್ನು ಅಗೌರವದಿಂದ ಕಾಣುವುದು, ಸುಖಾಸುಮ್ಮನೆ ಔಟ್ ಗಾಗಿ ಅಂಪೈರ್ ಬಳಿ ಮನವಿ ಮಾಡುವುದನ್ನೂ ಕೂಡ ನೂತನ ನಿಯಮಾವಳಿಗಳ ಪ್ರಕಾರ ದುರ್ವರ್ತನೆ ಎಂದು  ಪರಿಗಣಿಸಲಾಗುತ್ತದೆ. ಇದಲ್ಲದೆ ಪಂದ್ಯ ಚಾಲ್ತಿಯಲ್ಲಿರುವ ಸಂದರ್ಭದಲ್ಲಿ ಆಟಗಾರರು ಅಧಿಕಾರಿಗಳನ್ನು ಸಂಪರ್ಕಿಸುವುದೂ ಕೂಡ ದುರ್ವರ್ತನೆ ಅಡಿಯಲ್ಲೇ ಬರಲಿದೆ. 
ಅಂಪೈರ್ ನಿರ್ಧಾರ ಪರಾಮರ್ಶೆ ವ್ಯವಸ್ಥೆ(ಡಿಆರ್ಎಸ್) ಮುಂದುವರೆಯಲಿದ್ದು ರಿವ್ಯೂ ತೆಗೆದುಕೊಂಡಾಗ ಅಂಪೈರ್ ತೀರ್ಪು ಸರಿ ಇದ್ದಾಗ ಅಂತಹ ತಂಡದ ಮತ್ತೊಂದು ರಿವ್ಯೂ ಪಡೆಯುವ ಅವಕಾಶದಿಂದ ವಂಚಿತರಾಗಲಿದ್ದಾರೆ. ಇನ್ನು ಮುಂದೆ ಟಿ20 ಕ್ರಿಕೆಟ್ ನಲ್ಲೂ ಡಿಆರ್ಎಸ್ ಚಾಲನೆಗೆ ಬರಲಿದೆ. 

ಇನ್ನು ರನ್ ಔಟ್ ನಲ್ಲೂ ಭಾರೀ ಬದಲಾವಣೆ ಬಂದಿದೆ. ಈ ಹಿಂದಿನ ನಿಯಮಾವಳಿ ಪ್ರಕಾರ ರನ್ ಔಟ್ ಆಗುವಾಗ ಆಟಗಾರನ ಬ್ಯಾಟ್ ಸ್ಕ್ರೀಸ್ ಒಳಗಿದ್ದು ಬ್ಯಾಟ್ ನೆಲಕ್ಕೆ ತಾಗದಿದ್ದರೆ ಅದನ್ನು ರನ್ ಔಟ್ ಎಂದು ಪರಿಗಣಿಸಲಾಗುತ್ತಿತ್ತು. ಆದರೆ ಈಗ ಬ್ಯಾಟ್ ಸ್ಕ್ರೀಸ್ ಒಳಗಿದ್ದರೆ ಸಾಕು ಅದನ್ನು ನಾಟೌಟ್ ಎಂದು ಪರಿಗಣಿಸಲಾಗುತ್ತದೆ. ಈ ನಿಯಮ ಸ್ಟಂಪ್ ಔಟ್ ಗೂ ಅನ್ವಯವಾಗುತ್ತದೆ. 
SCROLL FOR NEXT