ಸಿಡ್ನಿ: ಚೆಂಡು ವಿರೂಪಗೊಳಿಸಿದ ಪ್ರಕರಣ ಆಸಿಸ್ ಕ್ರೀಕೆಟಿಗರ ಕ್ರೀಡಾ ಮನೋಭಾವವನ್ನು ಇಡೀ ವಿಶ್ವಕ್ಕೇ ಪ್ರದರ್ಶನ ಮಾಡಿದ್ದು, ಆಸಿಸ್ ಮಾಜಿ ಉಪ ನಾಯಕ ಡೇವಿಡ್ ವಾರ್ನರ್ ಅವರ ಕ್ರಿಕೆಟ್ ಜೀವನವನ್ನೇ ಬಲಿತೆಗೆದುಕೊಂಡಿದೆ. ಇಷ್ಟಕ್ಕೂ ಈ ಬಾಲ್ ಟ್ಯಾಂಪರಿಂಗ್ ಪ್ರಕರಣಕ್ಕೆ ವಾರ್ನರ್ ಪತ್ನಿ ಕ್ಯಾಂಡಿಸ್ ವಾರ್ನರ್ ಕಾರಣಾನಾ.. ಆಕೆಗೂ ಪ್ರಕರಣಕ್ಕೂ ಏನು ಸಂಬಂಧ..?
ಹುಚ್ಚಾಟವೊಂದು ಹೇಗೆ ನೆಲಕ್ಕೆ ಕೊಡವಿ ತಿವಿದು ಬಲಿ ತೆಗೆದುಕೊಳ್ಳಬಹುದು ಎಂಬುದಕ್ಕೆ ಆಸಿಸ್ ಆಟಗಾರರ ಬಾಲ್ ಟ್ಯಾಂಪರಿಂಗ್ ಹಗರಣ ಉತ್ತಮ ಉದಾಹರಣೆಯಾಗಿದೆ. ಪ್ರಕರಣದಿಂದ ಮನನೊಂದು ಆಸೀಸ್ ಕೋಚ್ ಲೆಹ್ಮನ್ ಹುದ್ದೆ ತಜಿಸಿದರೆ, ಆಸಿಸ್ ನಾಯಕ ಸ್ಮಿತ್ ಒಂದು ವರ್ಷ ನಿಷೇಧಕ್ಕೊಳಗಾಗುವ ಮೂಲಕ ತನ್ನ ಹೆತ್ತವರು ತಲೆ ತಗ್ಗಿಸುವಂತೆ ಮಾಡಿದ್ದಾರೆ. ಅಲ್ಲದೆ ಇಷ್ಟು ದಿನ ಸ್ಮಿತ್ ಪೋಷಕರು ತಮ್ಮ ಕುಟುಂಬದ ಸದಸ್ಯನಂತೆ ಕಾಣುತ್ತಿದ್ದ ಕ್ರಿಕೆಟ್ ಕಿಟ್ ಈಗ ಕಸದ ಬುಟ್ಟಿ ಸೇರಿದೆ.
ಉದಯೋನ್ಮುಖ ಆಟಗಾರ ಬ್ಕಾಂಕ್ರಾಫ್ಟ್ ತಮ್ಮ ಆರಂಭಿಕ ವೃತ್ತಿ ಜೀವನದಲ್ಲೇ ನಿಷೇಧಕ್ಕೊಳಗಾಗಿದ್ದಾರೆ. ಇನ್ನು ಆಸಿಸ್ ಸ್ಫೋಟಕ ಬ್ಯಾಟ್ಸಮನ್ ಮತ್ತು ಉಪ ನಾಯಕ ಡೇವಿಡ್ ವಾರ್ನರ್ ಕ್ರಿಕೆಟ್ ಜೀವನವೇ ನಶಿಸಿ ಹೋಗಿದೆ. ಇಷ್ಟೆಲ್ಲಾ ಅವಾಂತರಕ್ಕೆ ಕಾರಣವಾಗಿದ್ದು ಚೆಂಡು ವಿರೂಪಗೊಳಿಸಿದ ಪ್ರಕರಣ. ಆದರೆ ಇದೀಗ ಈ ಚೆಂಡು ವಿರೂಪಗೊಳಿಸಿದ ಪ್ರಕರಣಕ್ಕೆ ತಾವೇ ಕಾರಣ ಎಂದು ವಾರ್ನರ್ ಪತ್ನಿ ಕ್ಯಾಂಡಿಸ್ ಹೇಳಿಕೊಂಡಿದ್ದಾರೆ.
"ಎಲ್ಲವೂ ನನ್ನದೇ ತಪ್ಪು ಎನ್ನುವಂತೆ ಭಾಸವಾಗುತ್ತಿದೆ. ಘಟನೆ ನನ್ನನ್ನು ಕೊಲ್ಲುತ್ತಿದೆ. ನನ್ನನ್ನು ಸಂಪೂರ್ಣವಾಗಿ ಕೊಲ್ಲುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿ ಗಂಡನ ವರ್ತನೆಯನ್ನು ಕ್ಷಮಿಸುವಂತೆ ನಾನು ಕೇಳುತ್ತಿಲ್ಲ. ಘಟನೆಯಿಂದ ನೊಂದುಕೊಂಡಿರುವ ನನ್ನನ್ನು ಡೇವಿ ಎಷ್ಟು ಸಾಧ್ಯವೋ ಅಷ್ಟರ ಮಟ್ಟಿಗೆ ಸಮಾಧಾನಿಸುತ್ತಿದ್ದಾರೆ. ಮಕ್ಕಳನ್ನೂ ಸಾಂತ್ವಾನಿಸುತ್ತಿದ್ದಾರೆ. ಘಟನೆ ನಡೆದ ದಿನ ಡೇವ್ ಮನೆಗೆ ಬಂದರು. ಬೆಡ್‌ರೂಮ್‌ನಲ್ಲಿ ಅವರು ನನ್ನತ್ತ ದಿಟ್ಟಿಸುವಾಗ ಅವರ ಕಣ್ಣುಗಳು ತೊಯ್ದಿದ್ದವು. ನಮ್ಮಿಬ್ಬರನ್ನು ಗಮನಿಸಿ ಏನೆಂದೇ ಅರ್ಥವಾಗದ ಇಬ್ಬರು ಪುಟಾಣಿ ಹೆಣ್ಣುಮಕ್ಕಳು ಪ್ರಶ್ನಾರ್ಥಕವಾಗಿ ನನ್ನತ್ತಲೇ ಹರಿಸಿದ ನೋಟ ಆ ದಿನ ನನ್ನ ಹೃದಯ ಹಿಂಡಿತ್ತು...' ಎಂದು ಹೇಳುತ್ತ ಕ್ಯಾಂಡೀಸ್ ಭಾವುಕರಾದರು.
ಇಷ್ಟಕ್ಕೂ ಪ್ರಕರಣಕ್ಕೂ ಕ್ಯಾಂಡಿಸ್ ಗೂ ಏನು ಸಂಬಂಧ
ಬಾಲ್ ಟ್ಯಾಂಪರಿಂಗ್ ಪ್ರಕರಣವನ್ನೂ ಕೊಂಚ ಸೂಕ್ಷ್ಮವಾಗಿ ಅವಲೋಕಿಸಿದರೆ ಆಸಿಸ್ ಆಟಗಾರರ ದುರ್ವರ್ತನೆ ಹಿಂದೆ ವಾರ್ನರ್ ಪತ್ನಿ ಕ್ಯಾಂಡಿಸ್ ಗಾದ ಅಪಮಾನವೇ ಕಾರಣ ಎನ್ನಬಹುದು. ಕಾರಣ ವಾರ್ನರ್ ಪತ್ನಿ ಕ್ಯಾಂಡಿಸ್ ಈ ಹಿಂದೆ ಅಂದರೆ ವಾರ್ನರ್ ಜೊತೆಗಿನ ಮದುವೆಗೂ ಮುನ್ನ 2007ರಲ್ಲಿ ತನ್ನ ಮಾಜಿ ಪ್ರಿಯಕರ ರಗ್ಬಿ ಆಟಗಾರ ಸೋನಿ ಬಿಲ್ ವಿಲಿಯಮ್ಸ್ ರೊಂದಿಗೆ ಕ್ಲೋವೆಲ್ಲಿ ಹೊಟೆಲ್ ನಲ್ಲಿ ಲೈಂಗಿಕ ಕ್ರಿಯೆ ನಡೆಸಿ ಸಿಕ್ಕಿಬಿದ್ದಿದ್ದರು. ಬಳಿಕ ಸೋನಿ ಬಿಲ್ ವಿಲಿಯಮ್ಸ್ ರೊಂದಿಗಿನ ಸಂಬಂಧವನ್ನು ಕ್ಯಾಂಡಿಸ್ ಕಡಿದುಕೊಂಡಿದ್ದರು. ಇದೀಗ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದ ವೇಳೆ ಆಫ್ರಿಕನ್ ಅಭಿಮಾನಿಗಳು ಗ್ಯಾಲರಿಯಲ್ಲಿ ಸೋನಿ ಬಿಲ್ ವಿಲಿಯಮ್ಸ್ ಮುಖವಾಡ ಧರಿಸಿ ಕ್ಯಾಂಡಿಸ್ ರನ್ನು ದಿಟ್ಟಿಸುತ್ತ ಅಸಭ್ಯವಾಗಿ ವರ್ತಿಸುತ್ತಿದ್ದರು. ಇದು ವಾರ್ನರ್ ಆಕ್ರೋಶಕ್ಕೆ ಕಾರಣವಾಗಿತ್ತು.
ಇದೇ ಸಂದರ್ಭದಲ್ಲಿ ಆಫ್ರಿಕಾದ ಆಟಗಾರ ಕ್ವಿಂಟನ್ ಡಿ ಕಾಕ್ ಪೆವಿಲಿಯನ್ ಗೆ ತೆರಳುವ ವೇಳೆ ವಾರ್ನರ್ ಪತ್ನಿಯ ನಡತೆಯ ಕುರಿತು ಅಸಭ್ಯವಾಗಿ ಮಾತನಾಡಿದ್ದರು. ಇದರಿಂದ ಕ್ರೋಧಗೊಂಡ ವಾರ್ನರ್ ಪೆವಿಲಿಯನ್ ನಲ್ಲೇ ಡಿಕಾಕ್ ರೊಂದಿಗೆ ಜಟಾಪಟಿಗೆ ಮುಂದಾದರು. ಈ ವೇಳೆ ಸಹ ಆಟಗಾರರು ವಾರ್ನರ್ ರನ್ನು ನಿಯಂತ್ರಿಸಿದರು. ಈ ಎಲ್ಲ ಬೆಳವಣಿಗೆಗಳು ಆಪ್ರಿಕಾ ವಿರುದ್ಧ ಆಸಿಸ್ ಆಟಗಾರರು ಗೆಲ್ಲಲೇ ಬೇಕು ಎಂಬ ಜಿದ್ದಿಗೆ ಬಿದ್ದದ್ದು, ಬಾಲ್ ಟ್ಯಾಂಪರಿಂಗ್ ಗೆ ಕಾರಣವಾಯಿತು ಎನ್ನಬಹುದು.