ನವದೆಹಲಿ: ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ಆಗ್ರಹಿಸಿ ತಮಿಳುನಾಡಿನಲ್ಲಿ ನಡೆಯುತ್ತಿರುವ ಪ್ರತಿಭಟನೆ ಹಿನ್ನೆಲೆ ಚೆನ್ನೈನಲ್ಲಿ ನಡೆಯಬೇಕಾಗಿರುವ ಐಪಿಎಲ್ ಪಂದ್ಯಗಳನ್ನು ಪುಣೆಗೆ ಸ್ಥಳಾಂತರಿಸಲಾಗಿದೆ.
ತಮಿಳುನಾಡಿನಲ್ಲಿ ಪ್ರತಿಭಟನೆಗಳು ತೀವ್ರಗೊಂಡ ಹಿನ್ನೆಲೆಯಲ್ಲಿ ಆಟಗಾರರ ಭದ್ರತೆಯ ಹಿತದೃಷ್ಟಿಯಿಂದ ಚೆನ್ನೈನಲ್ಲಿ ನಡೆಯಬೇಕಾಗಿದ್ದ 6 ಪಂದ್ಯಗಳನ್ನು ಸ್ಥಳಾಂತರಿಸಲಾಗಿದೆ. ಪ್ರಸ್ತುತ ಇರುವ ಸನ್ನಿವೇಶದಲ್ಲಿ ಸೂಕ್ತ ಭದ್ರತೆ ಒದಗಿಸಲು ತಮ್ಮಿಂದ ಸಾಧ್ಯವಿಲ್ಲ ಎಂದು ಪೊಲೀಸರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಆದ ಕಾರಣ ಪಂದ್ಯಗಳನ್ನು ಚೆನ್ನೈನಿಂದ ಪುಣೆಗೆ ಸ್ಥಳಾಂತರಿಸಲಾಗಿದೆ ಎಂದು ಐಪಿಎಲ್ ಮುಖ್ಯಸ್ಥ ರಾಜೀವ್ ಶುಕ್ಲಾ ತಿಳಿಸಿದ್ದಾರೆ.
ಕಾವೇರಿ ನಿರ್ವಹಣಾ ಮಂಡಳಿ ರಚನೆ ಆಗುವವರೆಗೂ ಚೆನ್ನೈನಲ್ಲಿ ಐಪಿಎಲ್ ಪಂದ್ಯಗಳ ಆಯೋಜನೆಗೆ ಅವಕಾಶ ನೀಡಬಾರದು ಎಂದು ರಾಜಕೀಯ ಪಕ್ಷಗಳು ಸೇರಿದಂತೆ ಹಲವು ಸಂಘಟನೆಗಳು ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿವೆ. ಅಲ್ಲದೆ ಮಂಗಳವಾರ ಚೆನ್ನೈ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ನಡೆದ ಪಂದ್ಯಕ್ಕೂ ಪ್ರತಿಭಟನೆ ಬಿಸಿ ತಾಕಿತ್ತು. ಭಾರೀ ಭದ್ರತೆಯ ನಡುವೆಯೂ ಚೆನ್ನೈ ತಂಡದ ರವೀಂದ್ರ ಜಡೇಜಾರ ಮೇಲೆ ಶೂ ಎಸೆತದಂತಹ ಅಹಿತಕರ ಘಟನೆ ಸಹ ನಡೆದಿತ್ತು.