ನವದೆಹಲಿ: ಹಾಲಿ ಐಪಿಎಲ್ 2018ನೇ ಸಾಲಿನ ಟೂರ್ನಿಯಲ್ಲಿ ದೆಹಲಿ ತಂಡದ ಸಾರಥ್ಯ ವಹಿಸಿದ್ದ ಗೌತಮ್ ಗಂಭೀರ್ ತಂಡದ ಕಳಪೆ ಪ್ರದರ್ಶನದಿಂದ ತೀವ್ರ ಬೇಸತ್ತಿದ್ದು, ನಾಯಕತ್ವ ಮಾತ್ರವಲ್ಲದೇ ಟೂರ್ನಿಗಾಗಿ ತಾವು ಪಡೆಯಬೇಕಿದ್ದ ಸಂಭಾವನೆಯನ್ನು ಕೂಡ ಪಡೆಯದೇ ಇರಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.
ಐಪಿಎಲ್ ಟೂರ್ನಿಯಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡ ಸತತ ಸೋಲು ಕಾಣುತ್ತಿರುವ ಹಿನ್ನೆಲೆಯಲ್ಲಿ ಗೌತಮ್ ಗಂಭೀರ್ ತಂಡದ ನಾಯಕನ ಸ್ಥಾನದಿಂದ ಕೆಳಗಿಳಿದಿದ್ದು ಮಾತ್ರವಲ್ಲದೇ ಫ್ರಾಂಚೈಸಿಯಿಂದ ತಮ್ಮ ಸಂಭಾವನೆಯನ್ನು ಪಡೆಯದಿರಲು ನಿರ್ಧರಿಸಿದ್ದಾರೆ.
ಈ ಹಿಂದೆ ಕೋಲ್ಕತಾ ನೈಟ್ ರೈಡರ್ಸ್ ತಂಡದಿಂದ ಹೊರ ಬಂದಿದ್ದ ಗೌತಮ್ ಗಂಭೀರ್ ಅವರನ್ನು ಡೆಲ್ಲಿ ಡೇರ್ಡೆವಿಲ್ಸ್ ತಂಡ 2.8 ಕೋಟಿ ರೂ.ಗೆ ಖರೀದಿಸಿತ್ತು. ಗಂಭೀರ್ ಪ್ರಸಕ್ತ ಐಪಿಎಲ್ ಋತುವಿನಲ್ಲಿ 6 ಪಂದ್ಯಗಳಿಂದ ಕೇವಲ 85 ರನ್ ಗಳಿಸಿದ್ದಾರೆ. ಅಲ್ಲದೆ ಡೆಲ್ಲಿ ತಂಡ ಅವರ ನಾಯಕತ್ವದಲ್ಲಿ ಆಡಿದ 6 ಪಂದ್ಯಗಳ ಪೈಕಿ 5ರಲ್ಲಿ ಸೋಲನುಭವಿಸಿದೆ. ತಂಡದ ಈ ಕಳಪೆ ಪ್ರದರ್ಶನದಿಂದ ತೀವ್ರ ಬೇಸತ್ತಿರುವ ಗೌತಮ್ ಗಂಭೀರ್, ಈ ಋತುವಿನಲ್ಲಿ ಸಂಭಾವನೆಯನ್ನು ಪಡೆಯದಿರಲು ನಿರ್ಧರಿಸಿದ್ದಾರೆ. ಜತೆಗೆ ಉಳಿದ ಪಂದ್ಯಗಳಲ್ಲಿ ಉಚಿತವಾಗಿ ಆಡುವುದಾಗಿ ತಿಳಿಸಿದ್ದಾರೆ. ಈ ಮೂಲಕ ಗೌತಮ್ ಗಂಭೀರ್ ಕ್ರೀಡಾ ಸ್ಪೂರ್ತಿಯನ್ನು ಮರೆದಿದ್ದಾರೆ ಎಂದು ತಂಡದ ಮೂಲಗಳು ತಿಳಿಸಿವೆ.
ನಿನ್ನೆಯಷ್ಟೇ ಗಂಭೀರ್ ಡೆಲ್ಲಿ ತಂಡದ ನಾಯಕ ಸ್ಥಾನದಿಂದ ಕೆಳಗಿಳಿದಿದ್ದರು. ಗಂಭೀರ್ ಬದಲಿಗೆ ತಂಡದ ಉದಯೋನ್ಮುಖ ಆಟಗಾರ ಶ್ರೇಯಸ್ ಅಯ್ಯರ್ ನಾಯಕನ ಸ್ಥಾನ ಅಲಂಕರಿಸಿದ್ದರು.