ಲಂಡನ್: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅದ್ಭುತ ಆಟವನ್ನೇನೂ ಆಡಲಿಲ್ಲ, ಅವರು ಅಜೇಯ ಆಟಗಾರ ಅಲ್ಲ. ನಾವು ಕೈ ಚೆಲ್ಲಿದ ಕ್ಯಾಚ್ ಗಳು ದುಬಾರಿಯಾಯಿತು ಎಂದು ಇಂಗ್ಲೆಂಡ್ ತಂಡದ ವೇಗಿ ಜೇಮ್ಸ್ ಆ್ಯಂಡರ್ಸನ್ ಹೇಳಿದ್ದಾರೆ.
ಬರ್ಮಿಂಗ್ ಹ್ಯಾಮ್ ನ ಎಡ್ಜ್ ಬ್ಯಾಸ್ಟನ್ ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಇಂಗ್ಲೆಂಡ್ ತಂಡಕ್ಕೆ ಪದೇ ಪದೇ ಕಾಡುತ್ತಿದ್ದು, ಮೊದಲ ಇನ್ನಿಂಗ್ಸ್ ನಲ್ಲಿ ಇಂಗ್ಲೆಂಡ್ ವೇಗಿಗಳನ್ನು ಕಾಡಿದ್ದ ಕೊಹ್ಲಿ ಇದೀಗ ಎರಡನೇ ಇನ್ನಿಂಗ್ಸ್ ನಲ್ಲೂ ಇಂಗ್ಲೆಂಡ್ ಗೆಲುವಿಗೆ ತಡೆಯಾಗಿ ನಿಂತಿದ್ದಾರೆ.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ದಿನದಾಟದ ಅಂತ್ಯದ ಬಳಿಕ ಮಾತನಾಡಿ ಇಂಗ್ಲೆಂಡ್ ವೇಗಿ ಜೇಮ್ಸ್ ಆ್ಯಂಡರ್ಸನ್, ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅದ್ಭುತ ಆಟವನ್ನೇನೂ ಆಡಲಿಲ್ಲ, ಸ್ಲಿಪ್ ಕ್ಷೇತ್ರರಕ್ಷಕರು ಕ್ಯಾಚ್ ಕೈಚೆಲ್ಲಿದ್ದು ತಮ್ಮ ತಂಡಕ್ಕೆ ಮುಳುವಾಗಿದೆ ಎಂದು ಹೇಳಿದ್ದಾರೆ. '21ರನ್ ಗಳಿಸಿದ್ದ ವೇಳೆ ಕೊಹ್ಲಿ ಕ್ಯಾಚ್ ಅನ್ನು ಬಿಟ್ಟಿದ್ದು ಪ್ರಮಾದವಾಯಿತು. ಅವರು ಜಗತ್ತಿನ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾಗಿದ್ದಾರೆ. ಈ ರೀತಿಯ ಅವಕಾಶಗಳನ್ನು ಅವರು ಬಳಸಿಕೊಳ್ಳಲಿದ್ದಾರೆ. ಕ್ಯಾಚ್ ಪಡೆದಿದ್ದರೆ, ನಾವೀಗ ಇನ್ನಷ್ಟು ಉತ್ತಮ ಪರಿಸ್ಥಿತಿಯಲ್ಲಿ ಇರುತ್ತಿದ್ದೆವು. ಕ್ರಿಕೆಟ್ ಜಗತ್ತಿನಲ್ಲಿ ಯಾರೂ ಅಜೇಯರಲ್ಲ, ಅವರ ವಿಕೆಟ್ ಅನ್ನು ಪಡೆಯಬಹುದಾಗಿದೆ' ಎಂದು ಆ್ಯಂಡರ್ಸನ್ ತಿಳಿಸಿದ್ದಾರೆ.
ಅಂತೆಯೇ 'ಕೊಹ್ಲಿಗೆ ಬೌಲಿಂಗ್ ಮಾಡಿದ ರೀತಿಯ ಬಗ್ಗೆ ನಮಗೆ ಸಂತಸವಿದೆ. ಅನೇಕ ಬಾರಿ ಕೊಹ್ಲಿ ಬ್ಯಾಟಿನ ಅಂಚಿಗೆ ಚೆಂಡು ತಗುಲಿ ಸ್ಲಿಪ್ ಕ್ಷೇತ್ರರಕ್ಷಕರಿಗೆ ಅವಕಾಶ ಸಿಗುವಂತೆ ಮಾಡಿದ್ದೇವೆ. ಎರಡನೇ ದಿನ ಅವರನ್ನು ಔಟ್ ಮಾಡುವ ಅವಕಾಶವನ್ನು ಸೃಷ್ಟಿಸಿದ್ದೆ ಎಂದು ಆ್ಯಂಡರ್ಸನ್ ಹೇಳಿದ್ದಾರೆ.
ಭಾರತ-ಇಂಗ್ಲೆಂಡ್ ಮೊದಲ ಟೆಸ್ಟ್ ಪಂದ್ಯದ ವೇಳೆ ವಿರಾಟ್ ಕೊಹ್ಲಿ ಬ್ಯಾಟ್ ಮಾಡುತ್ತಿದ್ದ ವೇಳೆ, 21 ಹಾಗು 51ರನ್‌ಗಳಿಸಿದ್ದ ಸಂದರ್ಭ ಆಂಡರ್ಸನ್ ಬೌಲಿಂಗ್‌ನಲ್ಲಿ ಎರಡು ಬಾರಿ ಜೀವದಾನ ಪಡೆದಿದ್ದರು. ಎರಡೂ ನಿದರ್ಶನಗಳಲ್ಲಿ ಸ್ಲಿಪ್ ಕ್ಷೇತ್ರರಕ್ಷಕ ಡೇವಿಡ್ ಮಲಾನ್ ಪ್ರಮಾದವೆಸಗಿದ್ದರು. ಬಲಿಕ ಜೀವದಾನದ ಲಾಭ ಪಡೆದ ಕೊಹ್ಲಿ, 149 ರನ್‌ಗಳಿಸಿದ್ದಲ್ಲದೇ ತಂಡವನ್ನು ಸುರಕ್ಷಿತ ಮೊತ್ತದತ್ತ ಕೊಂಡೊಯ್ದರು. ಎರಡನೇ ಇನಿಂಗ್ಸ್ ನಲ್ಲಿ ತಂಡದ ಚೇಸಿಂಗ್ ನಲ್ಲಿ ಆಧಾರವಾಗಿ ನಿಂತಿರುವ ಕೊಹ್ಲಿ 43ರನ್ ಗಳಿಸಿ ಇಂದಿಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಗೆಲ್ಲಲು 194ರನ್‌ಗಳ ಗುರಿ ಪಡೆದಿರುವ ಭಾರತ, ಸದ್ಯ ಐದು ವಿಕೆಟ್ ಕಳೆದುಕೊಂಡು 110ರನ್ ಗಳಿಸಿದ್ದು ಇನ್ನೂ 84ರನ್‌ಗಳ ಅವಶ್ಯಕತೆ ಹೊಂದಿದೆ. ಕೊಹ್ಲಿ ಮತ್ತು ದಿನೇಶ್ ಕಾರ್ತಿಕ್ 4ನೇ ದಿನದಾಟ ಆರಂಭಿಸಲಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos