ಲಂಡನ್: ನನ್ನ ತಂಡಕ್ಕೆ ವಿಶ್ವದ ಯಾವುದಾದರೂ ಓರ್ವ ಆಟಗಾರರನ್ನು ಸೇರಿಸಿಕೊಳ್ಳುವದಾದರೆ ನನ್ನ ಮೊದಲ ಆಯ್ಕೆ ಖಂಡಿತವಾಗಿಯೂ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಎಂದು ವೆಸ್ಟ್ ಇಂಡೀಸ್ ಕ್ರಿಕೆಟ್ ಲೆಜೆಂಡ್ ಕ್ಲೈವ್ ಲಾಯ್ಡ್ ಹೇಳಿದ್ದಾರೆ.
ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿದ ಲಾಯ್ಡ್, ಓರ್ವ ನಾಯಕನಾಗಿ ಟೆಸ್ಟ್ ಕ್ರಿಕೆಟ್ ನಲ್ಲಿ ಕೊಹ್ಲಿ ಸಾಗಬೇಕಾದ ದೂರ ಸಾಕಷ್ಟಿದೆ. ಆದರೆ ನನ್ನ ಅಭಿಪ್ರಾಯದಂತೆ ಹೇಳುವುದಾದರೆ ವಿರಾಟ್ ಕೊಹ್ಲಿ ಆಧುನಿಕ ಕ್ರಿಕೆಟ್ ಸರ್ವಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬ. ವಿರಾಟ್ ಕೊಹ್ಲಿ ಕ್ರಿಕೆಟ್ ನಲ್ಲಿ ಅದಾಗಲೇ ಸಾಕಷ್ಟು ಸಕಾರಾತ್ಮಕ ಲಕ್ಷಣಗಳನ್ನು ತೋರಿದ್ದಾರೆ. ಹೌದು ಅವರು ಆಕ್ರಮಣಶೀಲರು, ಆದರೆ ಮಿತಿಯಲ್ಲಿ ಇರುವವರೆಗೂ ಎಲ್ಲವೂ ಚೆನ್ನ. ಆಕ್ರಮಣಶೀಲತೆ ಒಳ್ಳೆಯದ್ದೇ ಎಂದು ನಾನು ನಂಬಿದ್ದೇನೆ ಎಂದು ಹೇಳಿದ್ದಾರೆ.
ಇದೇ ವೇಳೆ ಕೊಹ್ಲಿ ಬ್ಯಾಟಿಂಗ್ ಕುರಿತು ಮಾತನಾಡಿದ ಲಾಯ್ಡ್,'ಕೊಹ್ಲಿ ಒಬ್ಬ ಅತ್ಯುತ್ತಮ ಬ್ಯಾಟ್ಸಮನ್ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಅವರ ತಂಡಕ್ಕೆ ಶ್ರೇಷ್ಠ ಕೊಡುಗೆ ನೀಡುತ್ತಿರುವ ಕೊಹ್ಲಿ ಕ್ರಿಕೆಟ್ ಜಗತ್ತಿನ ಯಾವುದೇ ಶ್ರೇಷ್ಠ ತಂಡದ ಭಾಗವಾಗಲು ಅರ್ಹರು. ನನ್ನ ತಂಡಕ್ಕೆ ಆಯ್ಕೆ ಮಾಡುವುದಾದರೆ ನಾನು ಖಂಡಿತಾ ಕೊಹ್ಲಿಯನ್ನು ಮೊದಲ ಆಯ್ಕೆಯಾಗಿ ಸ್ವೀಕರಿಸುತ್ತೇನೆ ಎಂದು ಲಾಯ್ಡ್ ಹೇಳಿದರು.
ಅಂತೆಯೇ ಕೊಹ್ಲಿ ಕುರಿತು ವಿವಿಯನ್ ರಿಚರ್ಡ್ಸ್ ಅವರ ಹೇಳಿಕೆಗೆ ಬೆಂಬಲ ವ್ಯಕ್ತಪಡಿಸಿದ ಲಾಯ್ಡ್, ಖಂಡಿತಾ ಅವರ ಮಾತಿಗೆ ನನ್ನ ಬೆಂಬಲವಿದೆ ಎಂದು ಹೇಳಿದರು.
ಅಂತೆಯೇ ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯನ್ನು ಕೂಡ ಪ್ರಶಂಶಿಸಿದ ಲಾಯ್ಡ್, 'ಇತ್ತೀಚಿನ ದಶಕಗಳಲ್ಲಿ ಸೌರವ್ ಗಂಗೂಲಿ ಹಾಗೂ ಎಂ ಎಸ್ ಧೋನಿಯ ನಾಯಕತ್ವ ಚೆನ್ನಾಗಿತ್ತು. ಧೋನಿ ಒಬ್ಬ ಅತ್ಯುತ್ತಮ ನಾಯಕ. ಇತರರಿಗೆ ಮಾದರಿಯಾದ ಧೋನಿ ಒಬ್ಬ ಅತ್ಯುತ್ತಮ ತಂತ್ರಗಾರರೂ ಹೌದು. ತಂಡವನ್ನು ಧೈರ್ಯದಿಂದ ಮುನ್ನಡೆಸುತ್ತಿದ್ದರು. ಅವರ ನಾಯಕತ್ವದ ಸ್ಟೈಲ್ ನನಗೆ ಇಷ್ಟವಾಗುತ್ತದೆ ಎಂದು ಲಾಯ್ಡ್ ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos