ಕ್ರಿಕೆಟ್

ನಿರ್ಗಮಿತ ಕೋಚ್ ರಮೇಶ್ ಪವಾರ್ ಮುಂದುವರಿಕೆಗೆ ಹರ್ಮನ್ ಪ್ರೀತ್ ಕೌರ್, ಸ್ಮೃತಿ ಮಂದಾನ ಬ್ಯಾಟಿಂಗ್!

Srinivasamurthy VN
ಮುಂಬೈ: ಭಾರತೀಯ ಮಹಿಳಾ ಕ್ರಿಕೆಟ್ ನಲ್ಲಿನ ಆಂತರಿಕ ಭಿನ್ನಮತ ಬೇಗುದಿ ಮತ್ತೆ ಮುಂದುವರೆದಿದ್ದು, ಮಿಥಾಲಿ ರಾಜ್ ಕೋಚ್ ರಮೇಶ್ ಪವಾರ್ ನಡುವಿನ ತಿಕ್ಕಾಟದಲ್ಲಿ ಭಾರತ ಚುಟುಕು ಕ್ರಿಕೆಟ್ ತಂಡದ ನಾಯಕ ಹರ್ಮನ್ ಪ್ರೀತ್ ಕೌರ್ ಪ್ರವೇಶ ಮಾಡಿದ್ದಾರೆ.
ಈ ಬಾರಿ ಕೋಚ್ ರಮೇಶ್ ಪವಾರ್ ಬೆನ್ನಿಗೆ ನಿಂತಿರುವ ಹರ್ಮನ್ ಪ್ರೀತ್ ಮತ್ತಷ್ಟು ದಿನಕ್ಕೆ ರಮೇಶ್ ಪವಾರ್ ಅವರನ್ನೇ ಕೋಚ್ ಆಗಿ ಮುಂದುವರೆಸಬೇಕು ಎಂದು ಆಗ್ರಹಿಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಬಿಸಿಸಿಐ ನಿರ್ವಾಹಕರ  ಸಮಿತಿ ಅಧ್ಯಕ್ಷ ವಿನೋದ್ ರೈ ಅವರು, ರಮೇಶ್ ಪವಾರ್ ಅವರನ್ನು ಕೋಚ್ ಆಗಿ ಮುಂದುವರೆಸುವಂತೆ ಹರ್ಮನ್ ಪ್ರೀತ್ ಕೌರ್ ಹಾಗೂ ಸ್ಮೃತಿಮಂದಾನ ಪತ್ರ ಬರೆದಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. 
ಅಂತೆಯೇ ಕೋಚ್ ರಮೇಶ್ ಪವಾರ್ ಅವರ ಒಪ್ಪಂದ ಅವಧಿ ಮುಕ್ತಾಯವಾಗಿದ್ದು, ಅವರು ಮತ್ತೆ ಕೋಚ್ ಆಯ್ಕೆಗೆ ಅರ್ಜಿ ಸಲ್ಲಿಸಬಹುದು ಎಂದು ಸ್ಪಷ್ಟಪಡಿಸಿದ್ದಾರೆ.
ಬಿಸಿಸಿಐಗೆ ಪತ್ರವೊಂದನ್ನು ಬರೆದಿರುವ ಹರ್ಮನ್ ಪ್ರೀತ್ ಕೌರ್, ಮುಂಬರುವ ಆಸ್ಟ್ರೇಲಿಯಾ ಪ್ರವಾಸಕ್ಕೆ ಕೆಲವೇ ದಿನಗಳು ಬಾಕಿ ಇದ್ದು, ವಿಶ್ವ ಮಹಿಳಾ ಟಿ20ಗೂ ಕೆಲವೇ ತಿಂಗಳು  ಬಾಕಿ ಇದೆ. ಈ ಹಂತದಲ್ಲಿ ಕೋಚ್ ಬದಲಾವಣೆ ಸರಿಯಲ್ಲ. ಅಲ್ಲದೆ ರಮೇಶ್ ಪವಾರ್ ಕೋಚ್ ಆಗಿ ಆಯ್ಕೆಯಾದ ಬಳಿಕ ತಂಡ ಅತ್ಯುತ್ತಮ ಫಾರ್ಮ್ ನಲ್ಲಿದೆ. ಅಲ್ಲದೆ ಆಟಗಾರ್ತಿಯರಲ್ಲಿ ಆತ್ಮ ವಿಶ್ವಾಸ ಹೆಚ್ಚಿದೆ. ಅಂತೆಯೇ ಆಟಗಾರ್ತಿಯರನ್ನು ಒಗ್ಗೂಡಿಸಿ ಒಂದು ತಂಡವಾಗಿ ಆಡುವಂತೆ ಸ್ಪೂರ್ತಿ ನೀಡಿದ್ದಾರೆ. ನನ್ನ ಪ್ರಕಾರ ಅವರನ್ನು ಬದಲಿಸುವ ಯಾವುದೇ ಸಮರ್ಥನೆ ತಮಗೆ ಕಾಣುತ್ತಿಲ್ಲ ಎಂದು ಹೇಳಿದ್ದಾರೆ.
ಇದೇ ವೇಳೆ ಹರ್ಮನ್ ಪ್ರೀತ್ ಹೇಳಿಕೆಗೆ ತಂಡದ ಮತ್ತೋರ್ವ ಆಟಗಾರ್ತಿ ಸ್ಮೃತಿ ಮಂದಾನ ಕೂಡ ಬೆಂಬಲ ನೀಡಿದ್ದು, ನಾಕೌಟ್ ಪಂದ್ಯದಿಂದ ಮಿಥಾಲಿ ಅವರನ್ನು ಕೈಬಿಟ್ಟಿದ್ದು, ತಂಡದ ಆಡಳಿತ ಸಮಿತಿಯ ನಿರ್ಧಾರವೇ ಹೊರತು ಕೋಚ್ ಪವಾರ್ ಅವರದ್ದಾಗಲಿ ಅಥವಾ ನಾಯಕಿ ಹರ್ಮನ್ ಪ್ರೀತ್ ಕೌರ್ ಅವರ ವೈಯುಕ್ತಿಕ ನಿರ್ಧಾರವಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
SCROLL FOR NEXT