ಅಡಿಲೇಡ್(ಆಸ್ಟ್ರೇಲಿಯಾ): ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಟೀಂ ಇಂಡಿಯಾ 250 ರನ್ ಗಳಿಗೆ ಆಲೌಟ್ ಆಗಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾ ಪರ ಆರಂಭಿಕರಾಗಿ ಕಣಕ್ಕಿಳಿದ ಕೆಎಲ್ ರಾಹುಲ್ 2 ರನ್ ಗಳಿಸಿ ಔಟಾದರೆ, ಮುರಳಿ ವಿಜಯ್ 11 ರನ್ ಗಳಿಸಿ ಪೆವಿಲಿಯನ್ ಸೇರಿದರು. ಇನ್ನು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬಂದಷ್ಟೇ ವೇಗವಾಗಿ ಕ್ವಾವಜಾಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದರು. ನಂತರ ತಾಳ್ಮೆಯ ಆಟವಾಡುತ್ತಿದ್ದ ಅಜಿಂಕ್ಯ ರಹಾನೆ ಸಹ 13 ರನ್ ಗಳಿಸಿ ಹಜಲ್ ವುಡ್ ಎಸೆತದಲ್ಲಿ ಹ್ಯಾಂಡ್ಸ್ ಕ್ಯೂಬ್ ಗೆ ಕ್ಯಾಚ್ ನೀಡಿ ಔಟಾದರು.
ಈ ವೇಳೆ ಪ್ರಮುಖ ಆಟಗಾರರು ಔಟಾಗುತ್ತಿದ್ದರು ತಾಳ್ಮೆಯ ಆಟವಾಡಿದ ಚೇತೇಶ್ವರ ಪೂಜಾರ 123 ಗಳಿಸಿ ಔಟಾದರು. ಪೂಜಾರ ಶತಕದ ನೆರವಿನಿಂದ ತಂಡ ಅಲ್ಪಮೊತ್ತಕ್ಕೆ ಆಲೌಟ್ ಆಗುವುದರಿಂದ ತಪ್ಪಿಸಿದರು. ರೋಹಿತ್ ಶರ್ಮಾ 37, ರಿಷಬ್ ಪಂತ್ 25, ಆರ್ ಅಶ್ವಿನ್ 25 ರನ್ ಪೇರಿಸಿ ಔಟಾದರು. ಮೊದಲ ದಿನದಾಟದಂತ್ಯಕ್ಕೆ ಭಾರತ 9 ವಿಕೆಟ್ ನಷ್ಟಕ್ಕೆ 250 ರನ್ ಪೇರಿಸಿತ್ತು.
ಇಂದು ಎರಡನೇ ದಿನದಾಟ ಆರಂಭಿಸಿದ ಮೊಹಮ್ಮದ್ ಶಮಿ ಅಜೇಯ 6 ರನ್ ಗಳಿಸಿದ್ದಾಗ ಹೆಜಲ್ವುಡ್ ಗೆ ವಿಕೆಟ್ ಒಪ್ಪಿಸಿದರು. ಅಲ್ಲಿಗೆ ಭಾರತದ ಮೊದಲ ಇನ್ನಿಂಗ್ಸ್ ಮುಕ್ತಾಯಗೊಂಡಿತು. ಆಸ್ಟ್ರೇಲಿಯಾ ಪರ ಬೌಲಿಂಗ್ ನಲ್ಲಿ ಹೇಜಲ್ವುಡ್ 3, ಸ್ಟಾರ್ಕ್, ಕಮ್ಮಿಸ್ ಹಾಗೂ ಲ್ಯಾನ್ ತಲಾ 2 ವಿಕೆಟ್ ಪಡೆದಿದ್ದಾರೆ.
ನಂತರ ಇನ್ನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ಬ್ಯಾಟ್ಸ್ ಮನ್ ಗಳಿಗೆ ಟೀಂ ಇಂಡಿಯಾ ಬೌಲರ್ ಗಳು ಕಂಟಕರಾದರು. ಎರಡನೇ ದಿನದಾಟದಂತ್ಯಕ್ಕೆ ಆಸ್ಟ್ರೇಲಿಯಾ 7 ವಿಕೆಟ್ ಕಳೆದುಕೊಂಡು 191 ರನ್ ಪೇರಿಸಿದ್ದು ಭಾರತ 59 ರನ್ ಗಳ ಮುನ್ನಡೆಯಲ್ಲಿದೆ.
ಆಸ್ಟ್ರೇಲಿಯಾ ಪರ ಹ್ಯಾರಿಸ್ 26, ಖವಾಜ 28, ಹ್ಯಾಂಡ್ಸ್ ಕ್ಯೂಬ್ 34 ರನ್ ಪೇರಿಸಿದ್ದು ಹೇಡ್ ಅಜೇಯ 61 ರನ್ ಹಾಗೂ ಸ್ಟಾರ್ಕ್ ಅಜೇಯ 8 ರನ್ ಗಳಿಸಿ ಕಣದಲ್ಲಿದ್ದು ನಾಳೆ ಮೂರನೇ ದಿನದಾಟವನ್ನು ಆರಂಭಿಸಲಿದ್ದಾರೆ.
ಭಾರತದ ಪರ ಬೌಲಿಂಗ್ ನಲ್ಲಿ ಅಶ್ವಿನ್ 3, ಇಶಾಂತ್ ಶರ್ಮಾ ಹಾಗೂ ಬುಮ್ರಾ ತಲಾ 2 ವಿಕೆಟ್ ಪಡೆದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics