ಮೆಲ್ಬೋರ್ನ್: ಇಡೀ ಕ್ರಿಕೆಟ್ ವಲಯದಲ್ಲೇ ಭಾರಿ ಸದ್ದು ಮಾಡಿದ್ದ ಆಸ್ಟ್ರೇಲಿಯಾ ಕ್ರಿಕೆಟಿಗರ ಬಾಲ್ ಟ್ಯಾಂಪರಿಂಗ್ ಪ್ರಕರಣದಲ್ಲೇ ನಿಷೇಧಿತ ಆಟಗಾರ ಡೇವಿಡ್ ವಾರ್ನರ್ ಅವರೇ ಮಾಸ್ಟರ್ ಮೈಂಡ್ ಎಂದು ಆರೋಪಿ ಆಟಗಾರ ಕ್ಯಾಮೆರಾನ್ ಬ್ಯಾಂಕ್ರಾಫ್ಟ್ ಹೇಳಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಬ್ಯಾಂಕ್ರಾಫ್ಟ್, ಚೆಂಡು ಬೌಲರ್ ನ ಹಿಡಿತಕ್ಕೆ ಸಿಗುವಂತೆ ಮಾಡು ಎಂದು ವಾರ್ನರ್ ಸೂಚನೆ ನೀಡಿದ್ದರು. ಅದರಂತೆ ನಾನು ಮಾಡಿದೆ. ಆದರೆ ಅದು ನನ್ನ ಕ್ರಿಕೆಟ್ ಜೀವನಕ್ಕೇ ಕಪ್ಪು ಚುಕ್ಕೆಯಾಗುತ್ತದೆ ಎಂದು ಭಾವಿಸಿರಲಿಲ್ಲ ಎಂದು ಹೇಳಿದ್ದಾರೆ.
ಅಂತೆಯೇ ಪ್ರಕರಣದಲ್ಲಿ ನನ್ನನ್ನುನಾನು ತಪ್ಪಿತಸ್ಥ ಎಂದು ಹೇಳಿಕೊಳ್ಳಲು ಸಾಧ್ಯವಿಲ್ಲ, ಅಂದು ಉಪನಾಯಕ ನೀಡಿದ್ದ ಸಲಹೆ ಮೇರೆಗೆ ಹಾಗೆ ಮಾಡಿದ್ದೇ ವಿನಃ ಅದು ನನ್ನ ನಿರ್ಣಯವಾಗಿರಲಿಲ್ಲ. ಅಂದಿನ ಪಂದ್ಯದಲ್ಲಿ ಗೆಲುವು ಸಾಧ್ಯವಿಲ್ಲ ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು ಎಂದು ಹೇಳಿದ್ದಾರೆ.
ಅಂತೆಯೇ ಪ್ರಕರಣದಲ್ಲಿ ಆರೋಪಿಗಳಾಗಿರುವ ಇತರೆ ಆಟಗಾರರಿಗೆ ಹೋಲಿಕೆ ಮಾಡಿದರೆ ನನ್ನ ಪರಿಸ್ಥಿತಿ ಹೀನಾಯವಾಗಿದೆ ವಾರ್ನರ್ ಕ್ರಿಕೆಟ್ ಗೆ ವಿದಾಯ ಹೇಳಿದ್ದು, ಸ್ಮಿತ್ ನಾಯಕನಾಗಿ ಕಣ್ಣು ಮುಚ್ಚಿಕೊಂಡಿದ್ದೆ ಎಂದು ಹೇಳಿದ್ದಾರೆ. ಆ ಮೂಲಕ ಇಡೀ ಪ್ರಕರಣದ ಎಲ್ಲ ಹೊಣೆ ನನ್ನ ಮೇಲೆ ಬೀಳುತ್ತದೆ. ನಿಜಕ್ಕೂ ಈ ಪ್ರಕರಣವಾದ ಬಳಿಕ ಸಾಕಷ್ಚು ದಿನಗಳ ಕಾಲ ನಾನು ಸರಿಯಾಗಿ ನಿದ್ದೆ ಮಾಡಿಲ್ಲ. ನನ್ನ ಕೆಲಸದಿಂದಾಗಿ ತಂಡವನ್ನು ಮತ್ತು ಕ್ರಿಕೆಟ್ ಗೌರವ ಮತ್ತು ದೇಶದ ಘನತೆಗೆ ಚ್ಯುತಿ ತಂದಿದ್ದೇನೆ ಎಂಬ ಪಾಪ ಪ್ರಜ್ಞೆ ಕಾಡುತ್ತಿದೆ ಎಂದು ಬ್ಯಾಂಕ್ರಾಫ್ಟ್ ಹೇಳಿದ್ದಾರೆ.
ಕಳೆದ ಮಾರ್ಚ್ ನಲ್ಲಿ ಕೇಪ್ ಟೌನ್ ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಬ್ಯಾಂಕ್ರಾಫ್ಟ್ ಚೆಂಡನ್ನು ಸ್ಯಾಂಡ್ ಪೇಪರ್ ನಿಂದ ಉಜ್ಜಿ ಸಿಕ್ಕಿಬಿದಿದ್ದರು. ಈ ಪ್ರಕರಣ ಸಂಬಂಧ ಆಸಿಸ್ ನಾಯಕ ಸ್ಮಿತ್, ಉಪ ನಾಯಕ ವಾರ್ನರ್ ಮತ್ತು ಬ್ಕಾಂಕ್ರಾಫ್ಟ್ ಗೆ ನಿಷೇಧ ಶಿಕ್ಷೆ ವಿಧಿಸಲಾಗಿತ್ತು.