ಮೆಲ್ಬೋರ್ನ್: ಪದಾರ್ಪಣೆ ಪಂದ್ಯದಲ್ಲೇ ಪ್ರಬಲ ಕಾಂಗರೂಗಳ ವಿರುದ್ಧ ಅರ್ಧಶತಕ ಸಿಡಿಸಿದ್ದ ಮಯಾಂಕ್ ಅಗರ್ವಾಲ್ ಇದೀಗ ಫೀಲ್ಡಿಂಗ್ ನಲ್ಲೂ ತಮ್ಮ ಕೈ ಚಳಕ ತೋರಿ ಆಸ್ಟ್ರೇಲಿಯಾದ ಪತನಕ್ಕೆ ನಾಂದಿ ಹಾಡಿದರು.
ಹೌದು.. ಆಸ್ಟ್ರೇಲಿಯಾ ವಿರುದ್ಧ ಪದಾರ್ಪಣೆ ಮಾಡಿದ ಕರ್ನಾಟಕದ ಮಯಾಂಕ್ ಅಗರ್ವಾಲ್ ಎಲ್ಲ ರೀತಿಯಲ್ಲೂ ತಮ್ಮ ಚೊಚ್ಚಲ ಪಂದ್ಯವನ್ನು ಸ್ಮರಣೀಯವಾಗಿಸಿದ್ದಾರೆ. ಮೊದಲು ಬ್ಯಾಟ್‌ನಲ್ಲಿ 76 ರನ್ ಗಳಿಸಿದ ಮಯಾಂಕ್ ಇದೀಗ ಫೀಲ್ಡಿಂಗ್‌ನಲ್ಲೂ ಅದ್ಭುತ ಕ್ಯಾಚ್ ಹಿಡಿಯುವ ಮೂಲಕ ಗಮನ ಸೆಳೆದಿದ್ದಾರೆ. ಬ್ಯಾಟಿಂಗ್ ವೇಳೆ ಮೊದಲ ಇನ್ನಿಂಗ್ಸ್ ನಲ್ಲಿ 76 ರನ್‌ಗಳ ಅಮೋಘ ಇನ್ನಿಂಗ್ಸ್ ಕಟ್ಟಿದ್ದರು. ಈ ಮೂಲಕ ಪದಾರ್ಪಣಾ ಪಂದ್ಯದಲ್ಲೇ ಅರ್ಧಶತಕ ಬಾರಿಸಿದ ಭಾರತದ ಏಳನೇ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದರು.
ಇದೀಗ ಇಶಾಂತ್ ಶರ್ಮಾ ದಾಳಿಯಲ್ಲಿ ಶಾರ್ಟ್ ಮಿಡ್‌ವಿಕೆಟ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಮಯಾಂಕ್, ಅಪಾಯಕಾರಿ ಆ್ಯರೋನ್ ಫಿಂಚ್ ಹೊರದಬ್ಬುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇಶಾಂತ್ ಶರ್ಮಾ ಎಸೆದ ಚೆಂಡನ್ನು ಆ್ಯರೋನ್ ಫಿಂಚ್ ಕವರ್ ಶಾರ್ಟ್ ಮಿಡ್‌ವಿಕೆಟ್ ನತ್ತ ತಳ್ಳಿದರು. ಆದರೆ ಅಲ್ಲಿ ನಿಂತಿದ್ದ ಮಯಾಂಕ್ ತೀರಾ ಕೆಳಮಟ್ಟದಲ್ಲಿ ಬಂದ ಚೆಂಡನ್ನು ಅದ್ಬುತವಾಗಿ ಬಗ್ಗಿ ಕ್ಯಾಚ್ ಪಡೆದರು. ಆ ಮೂಲಕ ತಾವು ಫೀಲ್ಡಿಂಗ್ ಗೂ ಸೈ ಎಂಬುದನ್ನು ಸಾಬೀತು ಮಾಡಿದರು. ಕೆಲವೇ ಹೊತ್ತಿನಲ್ಲಿ ರವೀಂದ್ರ ಜಡೇಜಾ ದಾಳಿಯಲ್ಲೂ ಉಸ್ಮಾನ್ ಖವಾಜಾ ನೀಡಿದ ಕ್ಯಾಚ್ ಹಿಡಿಯುವ ಮೂಲಕ ಮಯಾಂಕ್ ಮತ್ತೆ ಮೋಡಿ ಮಾಡಿದರು.
ಆ್ಯರಾನ್ ಫಿಂಚ್ ವಿಕೆಟ್ ಭಾರತಕ್ಕೆ ಸಿಕ್ಕ ಮೊದಲ ವಿಕೆಟ್ ಆಗಿದ್ದು, ಈ ವಿಕೆಟ್ ಪತನದ ಬೆನ್ನಲ್ಲೇ ಆಸ್ಟ್ರೇಲಿಯಾ ತಂಡದ ಪೆವಿಲಿಯನ್ ಪರೇಡ್ ಆರಂಭವಾಗಿತ್ತು. ಇದಾದ ಬಳಿಕ ಟಿಮ್ ಪೈನೆ ಪಡೆ ವಿಕೆಟ್ ಕಳೆದು ಕೊಂಡು ಸಂಕಷ್ಟಕ್ಕೆ ಸಿಲುಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics