ಮೆಲ್ಬರ್ನ್: ಟೀಂ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸಕ್ಕೂ ಮುನ್ನ ಈ ಬಾರಿ ಸ್ಲೆಡ್ಜಿಂಗ್ ಮಾಡುವುದಿಲ್ಲ ಅಂತ ಹೇಳಿಕೊಂಡಿದ್ದ ಆಸ್ಟ್ರೇಲಿಯನ್ನರು ಇದೀಗ ಟೀಂ ಇಂಡಿಯಾದ ಆಟಗಾರರನ್ನು ಒಬ್ಬೊಬ್ಬರನ್ನಾಗಿ ಸ್ಲೆಡ್ಜ್ ಮಾಡುತ್ತಿದ್ದಾರೆ.
ಮೆಲ್ಬೋರ್ನ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 3ನೇ ಟೆಸ್ಟ್ ಪಂದ್ಯದ 2ನೇ ದಿನದಾಟದ ವೇಳೆ ರೋಹಿತ್ ಶರ್ಮಾ ರನ್ನು ಆಸಿಸ್ ನಾಯಕ ಟಿಮ್ ಪೈನೆ ಕಿಚಾಯಿಸಿದರು. ರೋಹಿತ್ ಬ್ಯಾಟಿಂಗ್ ಮಾಡುತ್ತಿದ್ದಾಗ ಐಪಿಎಲ್ ಟೂರ್ನಿಯ ಕುರಿತು ಮಾತನಾಡಿದ ಪೈನೆ, ರೋಹಿತ್ ಎಂಸಿಜಿಯಲ್ಲಿ ಸಿಕ್ಸರ್ ಬಾರಿಸಿದರೆ ನಾನು ಮುಂಬೈ ಇಂಡಿಯನ್ಸ್ ತಂಡಕ್ಕೆ ಸೇರಿಕೊಳ್ಳುತ್ತೇನೆ ಎಂದು ಹೇಳಿದರು. ಪೈನೆ ಮಾತು ಕೇಳಿದ ರೋಹಿತ್ ನಕ್ಕು ಸುಮ್ಮನಾಗಿದ್ದರು.
ಮೂರನೇ ದಿನವಾದ ಇಂದು ಟೀಮ್ ಪೈನ್ ರಿಷಬ್ ಪಂತ್ ರನ್ನು ಕಿಚಾಯಿಸಿದ್ದು ನಾನು ನನ್ನ ಹೆಂಡತಿಯನ್ನು ಕರೆದುಕೊಂಡು ಸಿನಿಮಾ ನೋಡಲು ಹೋಗುತ್ತೇನೆ. ನೀನು ನನ್ನ ಮಕ್ಕಳನ್ನು ನೋಡಿಕೊಳ್ಳುತ್ತೀಯಾ? ನೀವು ಶಿಶುವಿಹಾರ ನಡೆಸುತ್ತೀರಾ? ಅವರನ್ನು ಕರೆದುಕೊಂಡು ಭೋಜನಕ್ಕೆ ಹೋಗುತ್ತೀರಾ? ಎಂದು ಗೇಲಿ ಮಾಡಿದ್ದಾರೆ.
ಟೀಮ್ ಪೈನೆಯ ಯಾವುದೇ ಮಾತಿಗೂ ರಿಷಬ್ ಪಂತ್ ಕೇರ್ ಮಾಡದೇ ತಮ್ಮ ಬ್ಯಾಟಿಂಗ್ ಅನ್ನು ಮುಂದುವರೆಸಿದ್ದಾರೆ. ಒಟ್ಟಿನಲ್ಲಿ ಸ್ಲೆಡ್ಜಿಂಗ್ ಮಾಡುವುದಿಲ್ಲ ಅಂತ ಹೇಳಿಕೊಂಡಿದ್ದ ಆಸ್ಟ್ರೇಲಿಯಾ ಇದೀಗ ಸ್ಲೆಡ್ಜಿಂಗ್ ಮಾಡಿ ಪಂದ್ಯವನ್ನು ಗೆಲ್ಲುವ ದುರಾಸೆಗೆ ಬಿದ್ದಿದೆ.