ಅಂಡರ್ 19 ವಿಶ್ವಕಪ್ ಗೆದ್ದ ಸಂತಸದಲ್ಲಿರುವ ಭಾರತ ಕ್ರಿಕೆಟ್ ತಂಡದ ನಾಯಕ ಪೃಥ್ವಿ ಶಾ, ತಮ್ಮ ಭಾವನೆಗಳನ್ನು ವರ್ಣಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.
ವಿಶ್ವಕಪ್ ವಿಜಯದಲ್ಲಿ ಹಲವು ಸವಿ ನೆನಪುಗಳು ಸೃಷ್ಟಿಯಾಗಿದ್ದು ಅತ್ಯಂತ ಸಂತಸ ಉಂಟಾಗಿದೆ, ವಿಶ್ವಕಪ್ ಗೆದ್ದಿರುವುದು ವಿಶೇಷವಾಗಿದ್ದು ಭಾರತಕ್ಕೆ ಹೆಮ್ಮೆಯ ವಿಷಯವಾಗಿದೆ ಎಂದು ಪೃಥ್ವಿ ಶಾ ಹೇಳಿದ್ದಾರೆ. ಈ ಟೂರ್ನಮೆಂಟ್ ಗಾಗಿ ಕಾಯುತ್ತಿದ್ದೆವು, ನಾವು ಒಟ್ಟಿಗೆ 1-2 ವರ್ಷ ಆಡಿದ್ದೇವೆ, ನಾನು ಒತ್ತಡದಲ್ಲಿದ್ದಾಗ ತಂಡ ನನ್ನ ನೆರವಿಗೆ ಬರುತ್ತಿತ್ತು ಎಂದು ಪೃಥ್ವಿ ಶಾ ತಿಳಿಸಿದ್ದಾರೆ.
ಇದೇ ವೇಳೆ ತಂಡವನ್ನು ಪ್ರೋತ್ಸಾಹಿಸಲು ಆಗಮಿಸುತ್ತಿದ್ದ ಜನರ ಬಗ್ಗೆಯೂ ಅಚ್ಚರಿ ವ್ಯಕ್ತಪಡಿಸಿದ್ದು, ಟೂರ್ನಮೆಂಟ್ ನ ಪ್ರಾರಂಭದಿಂದಲೂ ಜನರು ನಮ್ಮ ತಂಡವನ್ನು ಬೆಂಬಲಿಸುತ್ತಿದ್ದರು, ಕೇವಲ ಪದಗಳಲ್ಲಿ ವಿಶ್ವಕಪ್ ಗೆದ್ದಿರುವ ಭಾವನೆಯನ್ನು ವರ್ಣಿಸಲು ಸಾಧ್ಯವಾಗುತ್ತಿಲ್ಲ ಎಂದು ಶಾ ಹೇಳಿದ್ದಾರೆ.