ನವದೆಹಲಿ: ನ್ಯೂಜಿಲೆಂಡ್ ನಲ್ಲಿ ನಡೆಯುತ್ತಿರುವ ಅಂಡರ್ 19 ಕ್ರಿಕೆಟ್ ವಿಶ್ವಕಪ್ ನಲ್ಲಿ ಕೋಚ್ ರಾಹುಲ್ ದ್ರಾವಿಡ್ ನೇತೃತ್ವದ ಭಾರತ ತಂಡ ಅಮೋಘ ಪ್ರದರ್ಶನ ನೀಡುತ್ತಿದ್ದು, ವಿಶ್ವಕಪ್ ಗೆಲ್ಲುವ ಹಾಟ್ ಫೇವರ್ ಆಗಿದೆ.
ಈ ಹಿಂದೆ ವಿರಾಟ್ ಕೊಹ್ಲಿ ನೇತೃತ್ವದ ಅಂಡರ್ 19 ತಂಡ ಭಾರತಕ್ಕೆ ಮೂರನೇ ಅಂಡರ್ 19 ವಿಶ್ವಕಪ್ ಗೆದ್ದು ಕೊಟ್ಟಿತ್ತು. ಇದೀಗ ನಾಯಕ ಪೃಥ್ವಿ ಶಾ ನೇತೃತ್ವದ ಭಾರತ ತಂಡ ಕೂಡ ಆದೇ ಸಾಧನೆ ಹಾದಿಯಲ್ಲಿದ್ದು, ಪ್ರಸ್ತುತ ಅಂಡರ್ 19 ತಂಡದಲ್ಲಿ ಪ್ರಜ್ವಲಿಸುತ್ತಿರುವ ಬಹುತೇಕ ಆಟಗಾರರು ಟೀಂ ಇಂಡಿಯಾ ಬಾಗಿಲು ತಟ್ಟುತ್ತಿದ್ದಾರೆ. ಅಂಡರ್ 19 ಕ್ರಿಕೆಟ್ ವಿಶ್ವಕಪ್ ಟೂರ್ನಿ ಇದೀಗ ನಿರ್ಣಾಯಕ ಹಂತ ತಲುಪಿದ್ದು, ಕ್ರಿಕೆಟ್ ದಿಗ್ಗಜರೆಲ್ಲರೂ ಇತ್ತ ದೃಷ್ಟಿ ನೆಟ್ಟಿದ್ದಾರೆ. ಭವಿಷ್ಯದ ಕ್ರಿಕೆಟ್ ಸೂಪರ್ ಸ್ಟಾರ್ ಗಳು ಇಲ್ಲಿ ಉದಯವಾಗಿದ್ದು, ಈಗಾಗಲೇ ಟೂರ್ನಿಯಲ್ಲಿ ತಮ್ಮ ಸಾಮರ್ಥ್ಯ ಪ್ರದರ್ಶನ ಮಾಡಿದ್ದಾರೆ.
ಟೀಂ ಇಂಡಿಯಾ ಪರ ಅತ್ಯುತ್ತಮ ಪ್ರದರ್ಶನ ನೀಡಿ ತಂಡ ಸೇರ್ಪಡೆಗೆ ತುದಿಗಾಲಲ್ಲಿ ನಿಂತಿರುವ ಒಂದಷ್ಟು ಕ್ರಿಕೆಟಿಗರ ಮಾಹಿತಿ ಇಲ್ಲಿದೆ.
ಮಹಾರಾಷ್ಟ್ರ ಥಾಣೆ ಮೂಲದ ಕ್ರಿಕೆಟ್ ಪ್ರತಿಭೆ ಪೃಥ್ವಿ ಶಾ. ಹಾಲಿ ನಡೆಯುತ್ತಿರುವ ಅಂಡರ್ 19 ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಭಾರತ ತಂಡದ ನಾಯಕ. ಕೋಚ್ ರಾಹುಲ್ ದ್ರಾವಿಡ್ ಅವರ ನೇತೃತ್ವದಲ್ಲಿ ಪೃಥ್ವಿ ಶಾ ಭವಿಷ್ಯ ಟೀಂ ಇಂಡಿಯಾ ನಾಯಕರಾಗುವ ಎಲ್ಲ ಲಕ್ಷಣಗಳನ್ನೂ ಹೊಂದಿದ್ದಾರೆ. ಟೂರ್ನಿಯಲ್ಲಿ ತಮ್ಮ ನಾಯಕತ್ವದಿಂದ ಖ್ಯಾತಿ ಗಳಿಸಿರುವ ಪೃಥ್ವಿ ಶಾ ಒಟ್ಟು 7 ಪಂದ್ಯಗಳನ್ನಾಡಿ 65.25 ಸರಾಸರಿಯಲ್ಲಿ 248 ರನ್ ಗಳನ್ನು ಕಲೆಹಾಕಿದ್ದಾರೆ. ಅಲ್ಲದೆ ಟೂರ್ನಿಯಲ್ಲಿ ಇವರ ನೇತೃತ್ವದಲ್ಲಿ ಭಾರತ ತಂಡ ಆಡಿರುವ ಎಲ್ಲ ಪಂದ್ಯಗಳನ್ನೂ ಗೆದ್ದಿದೆ.
ಪಂಜಾಬ್ ನ ಫಜಿಲ್ಕಾ ಮೂಲದ ಶಬ್ ಮನ್ ಗಿಲ್ ಅಂಡರ್ 19 ಭಾರತ ಕ್ರಿಕೆಟ್ ತಂಡದ ವಿರಾಟ್ ಕೊಹ್ಲಿ ಎಂದೇ ಖ್ಯಾತಿ ಗಳಿಸಿದ್ದಾರೆ. ಕಾರಣ ಶಬ್ ಮನ್ ಗಿಲ್ ಅವರ ಬ್ಯಾಟಿಂಗ್ ಶೈಲಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅವರನ್ನೇ ಹೋಲುತ್ತದೆ. ಇದೇ ಕಾರಣಕ್ಕೆ ಶಬ್ ಮನ್ ಗಿಲ್ ಈ ಹಿಂದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಗೆ ಗ್ರಾಸವಾಗಿದ್ದರು. ಇನ್ನು ಗಿಲ್ ಒಟ್ಟು 7 ಪಂದ್ಯವನ್ನಾಡಿದ್ದು, ಟೂರ್ನಿಯಲ್ಲಿ ಅತೀ ಹೆಚ್ಚು ಅಂದರೆ ರನ್ ಸರಾಸರಿಯನ್ನು ಹೊಂದಿದ್ದಾರೆ. ಒಟ್ಟು 278 ರನ್ ಕಲೆ ಹಾಕಿದ್ದಾರೆ. ಕ್ರೈಸ್ಟ್ ಚರ್ಚ್ ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ನಡೆದ ಸೆಮಿ ಫೈನಲ್ ಪಂದ್ಯದಲ್ಲಿ ಶಬ್ ಮನ್ ಗಿಲ್ ಅಜೇಯ 102 ರನ್ ಸಿಡಿಸಿ ಭಾರತದ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದ್ಗರು.
ಸೌರಾಷ್ಟ್ರದ ಭಾವನಗರ ಮೂಲದ ಹೆಚ್ ಎಂ ದೇಸಾಯಿ ಅಂಡರ್ 19 ಭಾರತ ತಂಡದ ಪ್ರಮುಖ ಮಧ್ಯ ಕ್ರಮಾಂಕದ ಆಟಗಾರರಾಗಿದ್ದಾರೆ. ತಂಡದ ವಿಕೆಟ್ ಕೀಪರ್ ಕೂಡ ಆಗಿರುವ ದೇಸಾಯಿ ಒಟ್ಟು 4 ಪಂದ್ಯವನ್ನಾಡಿರುವ ದೇಸಾಯಿ 55.00 ಸರಾಸರಿಯಲ್ಲಿ 110 ರನ್ ಕಲೆಹಾಕಿದ್ದಾರೆ. ತಂಡದ ಕುಸಿತ ಕಂಡಾಗಲೆಲ್ಲಾ ತಂಡಕ್ಕೆ ದೇಸಾಯಿ ಆಸರೆಯಾಗಿರುತ್ತಾರೆ ಎಂಬ ನಂಬಿಕೆ ತಂಡದಲ್ಲಿದೆ. ಜಿಂಬಾಂಬ್ವೆ ವಿರುದ್ಧ ಲೀಗ್ ಹಂತದ ಪಂದ್ಯದಲ್ಲಿ ದೇಸಾಯಿ ಅಜೇಯ 52 ರನ್ ಸಿಡಿಸಿ ತಂಡದ ಗೆಲುವಿಗೆ ಕಾರಣರಾಗಿದ್ದರು.
ದೆಹಲಿ ಮೂಲದ ಆಟಗಾರ ಮನ್ಜೋತ್ ಕಲ್ರಾ ಭಾರತ ತಂಡ ಆರಂಭಿಕ ಬ್ಯಾಟ್ಸಮನ್ ಆಗಿದ್ದಾರೆ. ತಮ್ಮ ಸ್ಫೋಟಕ ಆಟದಿಂದಲೇ ಖ್ಯಾತಿ ಪಡೆದಿರುವ ಕಲ್ರಾ ಒಟ್ಟು 7 ಪಂದ್ಯಗಳನ್ನಾಡಿದ್ದು, ಒಟ್ಟು 279 ರನ್ ಕಲೆಹಾಕಿದ್ದಾರೆ. ಎಡಗೈ ಬ್ಯಾಟ್ಸಮನ್ ಆಗಿರುವ ಕಲ್ರಾ, ಅಗತ್ಯ ಬಿದ್ಜಾಗ ಬೌಲಿಂಗ್ ಮಾಡುವ ಮೂಲಕ ತಂಡಕ್ಕೆ ನೆರವಾಗಬಲ್ಲರು.
ರಾಜಸ್ತಾನದ ಬಾರ್ಮರ್ ಮೂಲದ ಕ್ರಿಕೆಟಿಗ ಕಮಲೇಶ್ ನಗರಕೋಟಿ. ಭಾರತ ತಂಡದ ಪ್ರಮುಖ ವೇಗಿಯಾಗಿರುವ ನಗರಕೋಟಿ ಈ ಹಿಂದೆ ತಮ್ಮ ವೇಗದ ಬೌಲಿಂಗ್ ನಿಂದಲೇ ಸುದ್ದಿಯಾಗಿದ್ದರು. ಪ್ರತೀ ಗಂಟೆಗೆ 140 ಕಿ.ಮೀ ಅಧಿಕ ವೇಗದಲ್ಲಿ ಬೌಲಿಂಗ್ ಮಾಡುವ ಸಾಮರ್ಥ್ಯ ಇವರಿಗಿದೆ. ಅಲ್ಲದೆ ಪಂದ್ಯದ ಸಂದರ್ಭದಲ್ಲಿ ಉತ್ತಮ ಲೈನ್ ಅಂಡ್ ಲೆನ್ತ್ ಕಾಯ್ದುಕೊಂಡು ಎದುರಾಳಿ ಬ್ಯಾಟ್ಸಮನ್ ಗಳ ಕಂಗೆಡಿಸುತ್ತಾರೆ. ನಗರಕೋಟಿ 7 ಪಂದ್ಯಗಳನ್ನಾಡಿದ್ದು, 17 ರನ್ ಕಲೆ ಹಾಕಿ ಒಟ್ಟು 11 ವಿಕೆಟ್ ಪಡೆದಿದ್ದಾರೆ.
ಅಸ್ಸಾಂ ನ ಗುವಾಹತಿ ಮೂಲದ ಕ್ರಿಕೆಟಿಗ ರಿಯಾನ್ ಪರಾಗ್ ಅಂಡರ್ 19 ಭಾರತ ಕ್ರಿಕೆಟ್ ತಂಡದಲ್ಲಿರುವ ಪ್ರಮುಖ ಸ್ಪಿನ್ನರ್ ಗಳಲ್ಲಿ ಒಬ್ಬರು. ತಮ್ಮ ಲೆಗ್ ಸ್ಪಿನ್ ಮೂಲಕವೇ ಎದುರಾಳಿ ಪಡೆಯ ಬ್ಯಾಟ್ಸಮನ್ ಗಳನ್ನು ಕಾಡುವ ಇವರು, ಒಟ್ಟು 4 ಪಂದ್ಯವನ್ನಾಡಿದ್ದು, 3 ವಿಕೆಟ್ ಕಬಳಿಸಿದ್ದಾರೆ. ತಂಡಕ್ಕೆ ಅಗತ್ಯ ಬಿದ್ದಾಗಲೆಲ್ಲಾ ಎದುರಾಳಿ ತಂಡ ರನ್ ವೇಗಕ್ಕೆ ಕಡಿವಾಣ ಹಾಕುವ ಪರಾಗ್ ಭವಿಷ್ಯದ ಕ್ರಿಕೆಟಿಗನೆಂಬ ಭರವಸೆ ಮೂಡಿಸಿದ್ದಾರೆ.
ಉತ್ತರ ಪ್ರದೇಶದ ನೋಯ್ಡಾ ಮೂಲದ ಕ್ರಿಕೆಟಿಗ ಶಿವಂ ಮಾವಿ ಭಾರತ ತಂಡದ ಪ್ರಮುಖ ವೇಗದ ಬೌಲರ್ ಆಗಿದ್ದಾರೆ. ತಮ್ಮ ವೇಗದ ಬೌಲಿಂಗ್ ನಿಂದಲೇ ಖ್ಯಾತಿ ಪಡೆದಿರುವ ಶಿವಂ ಮಾವಿ 140 ಕಿಮೀಗೂ ಅಧಿಕ ವೇಗದಲ್ಲಿ ಬೌಲಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಒಟ್ಟು 7 ಪಂದ್ಯವನ್ನಾಡಿರುವ ಮಾವಿ 15 ರನ್ ಗಳಿಸಿ ಒಟ್ಟು 9 ವಿಕೆಟ್ ಕಬಳಿಸಿದ್ದಾರೆ.
ಉತ್ತರ ಪ್ರದೇಶದ ಮೊರಾದಾಬಾದ್ ಮೂಲದ ಶಿವಸಿಂಗ್ ಭಾರತ ತಂಡದ ಪ್ರಮುಖ ಸ್ಪಿನ್ನರ್ ಆಗಿದ್ದಾರೆ. ಸ್ಲೋ ಮತ್ತು ಆರ್ಥೋಡಕ್ಸ್ ಸ್ಪಿನ್ ಬೌಲಿಂಗ್ ಶೈಲಿ ಹೊಂದಿರುವ ಶಿವಸಿಂಗ್ ಎದುರಾಳಿ ಬ್ಯಾಟ್ಸಮನ್ ನಿದ್ದೆಗೆಡಿಸಬಲ್ಲರು. ಒಟ್ಟು 7 ಪಂದ್ಯವನ್ನಾಡಿರುವ ಶಿವ ಸಿಂಗ್ 10 ಗಳಿಸಿ, 6 ವಿಕೆಟ್ ಕಬಳಿಸಿದ್ದಾರೆ.
ಪಶ್ಚಿಮ ಬಂಗಾಳದ ಹೂಗ್ಲಿ ಮೂಲದ ಇಶಾನ್ ಪೊರೆಲ್ ಭಾರತ ತಂಡದಲ್ಲಿರುವ ಪ್ರಮುಖ ವೇಗದ ಬೌಲರ್ ಆಗಿದ್ದಾರೆ. ತಮ್ಮ ಲೈನ್ ಅಂಡ್ ಲೆನ್ತ್ ನಿಂದಲೇ ಗಮನ ಸೆಳೆದಿರುವ ಪೊರೆಲ್ ಕೂಡ ನಿರಾಯಾಸವಾಗಿ ವಿಕೆಟ್ ಕಬಳಿಸಬಲ್ಲರು. ಬಲಗೈ ಬ್ಯಾಟ್ಸಮನ್ ಕೂಡ ಆಗಿರುವ ಪೊರೆಲ್ ಒಟ್ಟು ಐದು ಪಂದ್ಯಗಳನ್ನಾಡಿದ್ದು ಒಟ್ಟು 10 ವಿಕೆಟ್ ಕಬಳಿಸಿದ್ದಾರೆ.
ಜಾರ್ಖಂಡ್ ನ ಸರೈಕೆಲಾ ಖಾರ್ಸ್ವಾನ್ ಮೂಲದ ಅನುಕುಲ್ ರಾಯ್ ಭಾರತ ತಂಡದ ಸ್ಪಿನ್ ಅಸ್ತ್ರವಾಗಿದ್ದಾರೆ. ಟೀಂ ಇಂಡಿಯಾದ ಭವಿಷ್ಯದ ಪ್ರಮುಖ ಸ್ಪಿನ್ನರ್ ಎಂದೇ ಖ್ಯಾತಿ ಪಡೆದಿರುವ ರಾಯ್ ತಮ್ಮ ಸ್ಪಿನ್ ಜಾದೂ ಮೂಲಕ ಎದುರಾಳಿ ಬ್ಯಾಟ್ಸಮನ್ ಗಳನ್ನು ಪೆವಿಲಿಯನ್ ಪರೇಡ್ ಮಾಡಿಸಬಲ್ಲರು. ಇದೇ ಕಾರಣಕ್ಕೆ ಟೂರ್ನಿಯುದ್ದಕ್ಕೂ ನಿರಂತರವಾಗಿ ರಾಯ್ ತಂಡದಲ್ಲಿ ಉಳಿದುಕೊಂಡಿದ್ದಾರೆ. ಅಲ್ಲದೆ ಒಟ್ಟು 7 ಪಂದ್ಯಗಳಿಂದ ಬರೊಬ್ಬರಿ 19 ವಿಕೆಟ್ ಕಬಳಿಸಿದ್ದಾರೆ. ಎಡಗೈ ಬ್ಯಾಟ್ಸಮನ್ ಆಗಿರುವ ರಾಯ್ 41 ರನ್ ಕಲೆ ಹಾಕಿದ್ದಾರೆ.
ಪಂಜಾಬ್ ನ ಅಮೃತಸರ ಮೂಲದ ಅಭಿಷೇಕ್ ಶರ್ಮಾ ಅಂಡರ್ 19 ಭಾರತ ತಂಡದಲ್ಲಿರುನವ ಪ್ರಮುಖ ಆಲ್ ರೌಂಡರ್ ಆಗಿದ್ದಾರೆ. ಟೂರ್ನಿಯಲ್ಲಿ ಒಟ್ಟು ಆರು ಪಂದ್ಯಗಳನ್ನಾಡಿರುವ ಶರ್ಮಾ 26.00 ಸರಾಸರಿಯಲ್ಲಿ 78 ರನ್ ಕಲೆ ಹಾಕಿದ್ದಾರೆ. ಅಲ್ಲದೆ 8 ವಿಕೆಟ್ ಗಳನ್ನೂ ಕೂಡ ಪಡೆದಿದ್ದಾರೆ.