ನವದೆಹಲಿ: ಮುಂದಿನ ಕೆಲ ವರ್ಷಗಳಲ್ಲಿ ಬೆಂಗಳೂರಿನಲ್ಲಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ(ಎಸ್ಸಿಎ) ಕಟ್ಟಡದ ಕಾಮಗಾರಿ ಪೂರ್ಣಗೊಂಡ ನಂತರ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಕೇಂದ್ರ ಕಚೇರಿ ಗಾರ್ಡನ್ ಸಿಟಿಗೆ ಶಿಫ್ಟ್ ಆಗುವ ಸಾಧ್ಯತೆ ಇದೆ.
ಬೆಂಗಳೂರಿನಲ್ಲಿ ಬಿಸಿಸಿಐಗೆ 40 ಎಕರೆ ಜಾಗ ಸಿಕ್ಕಿದ್ದು ಅಲ್ಲಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ(ಎನ್ಸಿಎ) ಕಟ್ಟಡ ನಿರ್ಮಾಣವಾಗಲಿದೆ. ಕಾಮಗಾರಿ ಪೂರ್ಣಗೊಂಡ ಬಳಿಕ ಬಿಸಿಸಿಐ ಕೇಂದ್ರ ಕಚೇರಿ ಬೆಂಗಳೂರಿಗೆ ಶಿಫ್ಟ್ ಆಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ(ಎನ್ಸಿಎ) ಕಟ್ಟಡ ಐದು ಅಂತಸ್ತಿನ ಕಟ್ಟಡ ನಿರ್ಮಾಣವಾಗಲಿದ್ದು ಅಲ್ಲಿ ಪಂಚತಾರಾ ವಸತಿ ಸೌಲಭ್ಯಗಳು ಸಿಗಲಿವೆ. ಇನ್ನು ಬಿಸಿಸಿಐ ಮಂಡಳಿಯ ಸಭೆಗಳನ್ನು ಪಂಚತಾರಾ ಹೋಟೆಲ್ ಗಳಲ್ಲಿ ನಡೆಸಲಾಗುತ್ತಿದೆ. ಇದಕ್ಕೆ ದುಬಾರಿ ವೆಚ್ಚವನ್ನು ಮಾಡಲಾಗುತ್ತಿದ್ದು ಈ ಎಲ್ಲ ವೆಚ್ಚವನ್ನು ಕಡಿಮೆ ಮಾಡುವ ಸಲುವಾಗಿ ಈ ನಿರ್ಧಾರವನ್ನು ನಿರ್ವಾಹಕ ಮಂಡಳಿ ಸೂಚಿಸಿದೆ.
ಬಿಸಿಸಿಐ ಕಾರ್ಯಕಾರಿ ಅಧ್ಯಕ್ಷ ಸಿಕೆ ಖನ್ನಾ ಅವರು ಈ ಸಂಬಂಧ ಮಂಡಳಿಯ ಸದಸ್ಯರಿಗೆ ಪತ್ರ ಬರೆದಿದ್ದು ತಮ್ಮ ಸಲಹೆಗಳನ್ನು ನೀಡುವಂತೆ ಸೂಚಿಸಿದ್ದಾರೆ.
ಬಿಸಿಸಿಐಗೆ ಆಡಳಿತ ನಡೆಸಲು ಸೂಕ್ತವಾದ ಕಚೇರಿ ಮತ್ತು ಮೂಲಸೌಕರ್ಯವಿಲ್ಲ ಎಂಬ ಮಾತುಗಳು ಜನರಿಂದ ಬಲವಾಗಿ ಕೇಳಿ ಬರುತ್ತಿದೆ. ಇನ್ನು ಬೆಂಗಳೂರಿನಲ್ಲಿ 40 ಎಕರೆ ಭೂಮಿ ಮಂಡಳಿಗೆ ಸಿಕ್ಕಿದ್ದು ಇದು ಸಹ ವಿಮಾನ ನಿಲ್ದಾಣಕ್ಕೆ ಹತ್ತಿರವಾಗಿದೆ ಎಂದು ಮಂಡಳಿಯ ಸದಸ್ಯರಿಗೆ ಬರೆದ ಪತ್ರದಲ್ಲಿ ಖನ್ನಾ ತಿಳಿಸಿದ್ದಾರೆ.