ಕುಲ್ದೀಪ್ ಯಾದವ್-ಯಜುವೇಂದ್ರ ಚಹಾಲ್
ಹೈದರಾಬಾದ್: ಆತಿಥೇಯ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಯಜುವೇಂದ್ರ ಚಹಾಲ್ ಮತ್ತು ಕುಲ್ ದೀಪ್ ಯಾದವ್ ಸಾಧನೆ ಹಿಂದೆ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಪರಿಶ್ರಮ ಅಡಗಿದೆ ಎಂದು ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಅತುಲ್ ವಾಸ್ಸನ್ ಹೇಳಿದ್ದಾರೆ.
ದಕ್ಷಿಣ ಆಫ್ರಿಕಾ ನೆಲದಲ್ಲಿ ಇದೇ ಮೊದಲ ಬಾರಿಗೆ ಟೀಂ ಇಂಡಿಯಾ ಸರಣಿ ಗೆದ್ದು ಇತಿಹಾಸ ಸೃಷ್ಟಿಸಿದೆ. ಈ ಸರಣಿ ಗೆಲುವಿಗಾಗಿ ಸ್ಪಿನ್ ಬೌಲರ್ ಗಳಾದ ಚಹಾಲ್ ಮತ್ತು ಕುಲ್ ದೀಪ್ ಪ್ರಮುಖ ಪಾತ್ರವಹಿಸಿದ್ದಾರೆ. ಐದು ಏಕದಿನ ಪಂದ್ಯದಳಲ್ಲಿ ಈ ಜೋಡಿ ಒಟ್ಟು 30 ವಿಕೆಟ್ ಗಳನ್ನು ಪಡೆದಿದೆ. ಇವರ ಯಶಸ್ಸಿನ ಹಿಂದೆ ಮಾಜಿ ನಾಯಕ ಧೋನಿ ಪರಿಶ್ರಮ ಅಡಗಿದೆ ಎಂದು ಅತುಲ್ ವಾಸ್ಸನ್ ಅಭಿಪ್ರಾಯಪಟ್ಟಿದ್ದಾರೆ.
ಪಂದ್ಯದ ವೇಳೆ ಎಂಎಸ್ ಧೋನಿ ಬೌಲರ್ ಗಳಿಗೆ ಸಲಹೆ, ಸೂಚನೆಗಳನ್ನು ನೀಡುತ್ತಾರೆ. ಹೇ ಅಬ್ ಇದರ್ ನಿಕ್ಲೇಗಾ(ಹೇ ಈ ಕಡೆ ಸರಿಯುತ್ತಾನೆ), ಹೇ ಅಬ್ ಇದರ್ ಮಾರೇಗಾ(ಹೇ ಈ ಕಡೆ ಹೊಡಿಯುತ್ತಾನೆ) ಎಂಬುದು ಸ್ಟಂಪ್ ಮೈಕ್ ನಿಂದ ನಾನು ಕೇಳಿದ್ದೇನೆ. ಅವರ ಸೂಚನೆಯ ಮೇರೆಗೆ ಇಬ್ಬರೂ ಬೌಲಿಂಗ್ ಮಾಡಿ ಯಶಸ್ಸು ಕಂಡುಕೊಂಡಿದ್ದಾರೆ ಎಂದು ಅತುಲ್ ಹೇಳಿದ್ದಾರೆ.
ಸರಣಿ ಗೆಲುವಿನ ಐದನೇ ಏಕದಿನ ಪಂದ್ಯದಲ್ಲಿ ಕುಲ್ ದೀಪ್ ಯಾದವ್ ನಾಲ್ಕು ವಿಕೆಟ್ ಪಡೆದು ಮಿಂಚಿದರೆ ಚಹಾಲ್ ಎರಡು ವಿಕೆಟ್ ಗಳನ್ನು ಪಡೆದು ತಂಡಕ್ಕೆ ಆಸರೆಯಾಗಿದ್ದರು.